ವಾಷಿಂಗ್ಟನ್, ಜ. 07 (DaijiworldNews/MB) : ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಅಮೇರಿಕಾ ಕ್ಯಾಪಿಟಲ್ಗೆ (ಸಂಸತ್) ನುಗ್ಗಿ ಪೊಲೀಸರೊಂದಿಗೆ ಸಂಘರ್ಷ ನಡೆಸಿರುವ ಅನಿರೀಕ್ಷಿತ ಘಟನೆ ನಡೆದಿದ್ದು, ಈ ಸಂದರ್ಭದಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ. ಪ್ರಸ್ತುತ ಪರಿಸ್ಥಿತಿ ನಿಭಾಯಿಸಲು ಕರ್ಫ್ಯೂ ಹೇರಲಾಗಿದೆ ಎಂದು ವರದಿ ತಿಳಿಸಿದೆ.
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಜಯ ಗಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಟ್ರಂಪ್ ಬೆಂಬಲಿಗರು ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ ಭದ್ರತೆ ಉಲ್ಲಂಘನೆ ಮಾಡಿ ಕ್ಯಾಪಿಟಲ್ ಕಟ್ಟಡ್ಡಕ್ಕೆ ನುಗ್ಗಿ ದಾಂಧಲೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದರು. ಈ ಸಂದರ್ಭದಲ್ಲಿ ಅಮೇರಿಕಾ ಕಾಂಗ್ರೆಸ್ನ ಅನೇಕ ಅಧಿಕಾರಿಗಳು ಕೂಡಾ ಗಾಯಗೊಂಡಿದ್ದಾರೆ.
ಈ ಹಿಂಸಾಚಾರ ತೀವ್ರ ರೂಪ ತಳೆಯುತ್ತಿದ್ದಂತೆ ಡೊನಾಲ್ಡ್ ಟ್ರಂಪ್, ''ಹಿಂಸಾಚಾರವನ್ನು ಬಿಟ್ಟು ಕಾನೂನಿಗೆ ಬದ್ದರಾಗಿರಿ, ಈಗ ತಮ್ಮ ಮನೆಗೆ ಹಿಂತಿರುಗಿ'' ಎಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ. ಹಾಗೆಯೇ, ''ನಿಮಗೆ ನೋವಾಗಿದೆ ಹಾಗೂ ಚುನಾವಣೆಯಲ್ಲಿ ನಮಗೆ ಅನ್ಯಾಯವಾಗಿದೆ ಎಂದು ತಿಳಿದಿದೆ. ಆದರೆ ನೀವು ಈಗ ವಾಪಾಸ್ ಹೋಗಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು'' ಎಂದು ಟ್ರಂಪ್ ಮನವಿ ಮಾಡಿದ್ದಾರೆ. ಇದೇ ಸಂದರ್ಭ, ''ಈ ಚುನಾವಣೆಯು ಮೋಸದ ಚುನಾವಣೆ'' ಎಂದು ಕೂಡಾ ಆರೋಪಿಸಿದರು.
ಇನ್ನು ಈ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಜೋ ಬಿಡೆನ್, ''ಈ ಕ್ಷಣ ನಮ್ಮ ಪ್ರಜಾಪ್ರಭುತ್ವದ ಮೇಲೆ ಹಿಂದೆಂದೂ ನಡೆಯದ ದಾಳಿಯಾಗಿದೆ. ಅಮೇರಿಕಾದ ಕ್ಯಾಪಿಟಲ್ ಮೇಲೆಯೇ ಹಲ್ಲೆ ನಡೆದಿದೆ. ಜನಪ್ರತಿನಿಧಿಗಳು, ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಇದು ಕಾನೂನಿನ ಮೇಲೆಯಾದ ಹಲ್ಲೆ'' ಎಂದು ಹೇಳಿದ್ದಾರೆ.