ವಾಷಿಂಗ್ಟನ್, ಜ.07 (DaijiworldNews/PY): ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಅಮೇರಿಕಾ ಸಂಸತ್ಗೆ ನುಗ್ಗಿ ಪೊಲೀಸರೊಂದಿಗೆ ಸಂಘರ್ಷ ನಡೆಸಿದ ಬೆನ್ನಲ್ಲೇ ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಪಟ್ಟಂತೆ ಸುಳ್ಳು ಆರೋಪಗಳನ್ನು ಮಾಡಿರುವ ಡೊನಾಲ್ಡ್ ಟ್ರಂಪ್ ಅವರ ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ.
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಜಯ ಗಳಿಸಿರುವ ಹಿನ್ನೆಲೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಟ್ರಂಪ್ ಬೆಂಬಲಿಗರು ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಹಾಗೂ ಪ್ರಮಾಣೀಕರಿಸುವ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ ಭದ್ರತೆ ಉಲ್ಲಂಘನೆ ಮಾಡಿ ಕ್ಯಾಪಿಟಲ್ ಕಟ್ಟಡ್ಡಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಘಟನೆಗೆ ಸಂಬಂಧಿಸಿದಂತೆ ಟ್ವಿಟ್ಟರ್ನಲ್ಲಿ ಪದೇ ಪದೇ ಸುಳ್ಳು ಆರೋಪಗಳನ್ನು ಪೋಸ್ಟ್ ಮಾಡಿದ್ದರು. ಈ ಕಾರಣದಿಂದ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತಿನಲ್ಲಿಡಲಾಗಿದೆ. ಭವಿಷ್ಯದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಖಾತೆಯನ್ನು ಶಾಶ್ವತವಾಗಿ ಅಮಾನತಿನಲ್ಲಿಡಲಾಗುತ್ತದೆ ಎಂದು ಟ್ವಿಟ್ಟರ್ ಎಚ್ಚರಿಕೆ ನೀಡಿದೆ.
ಟ್ರಂಪ್ ಅವರು ಪೋಸ್ಟ್ ಮಾಡಿದಂತ ವಿಡಿಯೋವನ್ನು ಫೇಸ್ಬುಕ್ ಹಾಗೂ ಯೂಟ್ಯೂಬ್ ಕೂಡಾ ತೆಗೆದುಹಾಕಿದೆ. ಹಿಂಸಾಚಾರವನ್ನು ನಿಲ್ಲಿಸಿ ವಾಪಾಸ್ಸಾಗಲು ತಮ್ಮ ಬೆಂಬಲಿಗರಲ್ಲಿ ಮನವಿ ಮಾಡಿರುವ ಟ್ರಂಪ್, ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮೋಸವಾಗಿದೆ ಎಂದು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಿದ್ದರು.
"ಟ್ರಂಪ್ ಅವರು ಹೇಳಿಕೆಯು ಹಿಂಸಾಚಾರವನ್ನು ಕಡಿಮೆ ಮಾಡುವ ಬದಲಾಗಿ ಇನ್ನಷ್ಟು ಹೆಚ್ಚು ಮಾಡುತ್ತಿದೆ" ಎಂದು ಫೇಸ್ಬುಕ್ ಸಮಗ್ರತೆಯ ಉಪಾಧ್ಯಕ್ಷ ಗಯ್ ರಾಸೆನ್ ತಿಳಿಸಿದ್ದಾರೆ.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಅಮೇರಿಕಾ ಕ್ಯಾಪಿಟಲ್ಗೆ ನುಗ್ಗಿ ಪೊಲೀಸರೊಂದಿಗೆ ಸಂಘರ್ಷ ನಡೆಸಿರುವ ಅನಿರೀಕ್ಷಿತ ಘಟನೆ ನಡೆದಿದ್ದು, ಈ ಸಂದರ್ಭದಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ. ಪ್ರಸ್ತುತ ಪರಿಸ್ಥಿತಿ ನಿಭಾಯಿಸಲು ಕರ್ಫ್ಯೂ ಹೇರಲಾಗಿದೆ ಎಂದು ವರದಿ ಹೇಳಿದೆ.