ವಾಷಿಂಗ್ಟನ್, ಜ. 07 (DaijiworldNews/MB) : ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಅಮೇರಿಕಾ ಕ್ಯಾಪಿಟಲ್ಗೆ (ಸಂಸತ್) ನುಗ್ಗಿ ದಾಂದಲೆ ನಡೆಸಿದ್ದಾರೆ. ಪ್ರಸ್ತುತ ಪ್ರತಿಭಟನೆಯೂ ಹಿಂಸಾಚಾರಕ್ಕೆ ತಿರುಗಿದ್ದು ಗುಂಪು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಮಹಿಳೆಯೂ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ವಾಷಿಂಗ್ಟನ್ ಡಿ.ಸಿಯ ಪೊಲೀಸ್ ವರಿಷ್ಠಾಧಿಕಾರಿ ರಾಬರ್ಟ್ ಕಾಂಟೀ ಅವರು, ''ಹಿಂಸಾಚಾರ ತಡೆಯಲು ಪೊಲೀಸರು ಗುಂಡು ಹಾರಿಸಿದಾಗ ಓರ್ವ ಮಹಿಳೆಗೆ ಗುಂಡು ತಗುಲಿ ಸಾವನ್ನಪ್ಪಿದ್ದು, ಮೂವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ.
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಜಯ ಗಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಟ್ರಂಪ್ ಬೆಂಬಲಿಗರು ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ ಭದ್ರತೆ ಉಲ್ಲಂಘನೆ ಮಾಡಿ ಕ್ಯಾಪಿಟಲ್ ಕಟ್ಟಡ್ಡಕ್ಕೆ ನುಗ್ಗಿ ದಾಂದಲೆ ನಡೆಸಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ದರು.
''ಪೊಲೀಸರು ಪ್ರತಿಭಟನಾಕಾರರ ಹಿಂಸಾಚಾರ ಹತ್ತಿಕ್ಕಲು ರಾಸಾಯನಿಕ ಪ್ರಯೋಗ ಮಾಡಿದ್ದು ಆ ಸಂದರ್ಭ ಪ್ರತಿಭಟನಕಾರರು ಪ್ರತಿಯಾಗಿ ರಾಸಾಯನಿಕ ಪ್ರಯೋಗಿಸಿದ್ದರು. ಅಷ್ಟೇ ಅಲ್ಲದೇ ಅವರು ಕೃತಕ ತಡೆಗೋಡೆ ಒಡೆದು ಮುನ್ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆಗ ಮಹಿಳೆಯೊಬ್ಬರಿಗೆ ಗುಂಡು ತಗುಲಿದೆ'' ಎಂದು ವಾಷಿಂಗ್ಟನ್ ಡಿ.ಸಿಯ ಪೊಲೀಸ್ ವರಿಷ್ಠಾಧಿಕಾರಿ ರಾಬರ್ಟ್ ಕಾಂಟೀ ಹೇಳಿದರು.
ಹಾಗೆಯೇ, ''ಡೆಮಾಕ್ರಾಟಿಕ್ ನ್ಯಾಷನಲ್ ಕಮಿಟಿ ಮತ್ತು ಮತ್ತು ರಿಪಬ್ಲಿಕನ್ ನ್ಯಾಷನಲ್ ಕಮಿಟಿ ಕಚೇರಿ ಬಳಿ ತಲಾ ಒಂದು ಬಾಂಬ್ ಪತ್ತೆಯಾಗಿವೆ'' ಎಂದು ಕೂಡಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಈಗಾಗಲೇ 52 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.