ವಾಷಿಂಗ್ಟನ್, ಜ.08 (DaijiworldNews/PY): ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಅಮೇರಿಕಾ ಕ್ಯಾಪಿಟಲ್ಗೆ (ಸಂಸತ್) ನುಗ್ಗಿ ದಾಂಧಲೆ ನಡೆಸಿರುವದನ್ನು ಖಂಡಿಸಿರುವ ಡೊನಾಲ್ಡ್ ಟ್ರಂಪ್ ಅವರು, "ಅಧಿಕಾರವನ್ನು ಸುಗಮವಾಗಿ ಹಸ್ತಾಂತರ ಮಾಡಲಾಗುವುದು" ಎಂದು ತಿಳಿಸಿದ್ದಾರೆ.
ಪ್ರತಿಭಟನೆಯೂ ಹಿಂಸಾಚಾರಕ್ಕೆ ತಿರುಗಿದ್ದು ಗುಂಪು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದು, ಈ ವೇಳೆ ಮಹಿಳೆಯೂ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು.
"ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಅವರ ಗೆಲುವನ್ನು ಕೊನೆಗೂ ಒಪ್ಪಿಕೊಂಡ ಡೊನಾಲ್ಡ್ ಟ್ರಂಪ್ ಅವರು, ಅಧಿಕಾರವನ್ನು ಸುಗಮ, ಕ್ರಮಬದ್ದವಾಗಿ ಹಸ್ತಾಂತರ ಮಾಡುತ್ತೇನೆ" ಎಂದಿದ್ದಾರೆ.
"ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳನ್ನು ಅಮೇರಿಕಾ ಕಾಂಗ್ರೆಸ್ ಪ್ರಮಾಣೀಕರಿಸಿದೆ. ಜ.20ರಂದು ನೂತನ ಆಡಳಿತವನ್ನು ಉದ್ಘಾಟಿಸಲಾಗುವುದು" ಎಂದು ತಿಳಿಸಿದ್ದಾರೆ.
ಟ್ರಂಪ್ ಹಿಂಸಾಚಾರವನ್ನು ಖಂಡಿಸಿದ್ದು, "ಇದೊಂದು ಹೇಯ ಕೃತ್ಯ. ಅಮೇರಿಕರನ್ನರಂತೆ ನಾನು ಸಹ ಹಿಂಸಾಚಾರ ಹಾಗೂ ಹಾನಿಕರ ಘಟನೆಯಿಂದ ಅಸಮಾಧಾನಗೊಂಡಿದ್ದೇನೆ. ಅಮೇರಿಕಾ ಎಂದಿಗೂ ಕೂಡಾ ಕಾನೂನು ಸುವ್ಯವಸ್ಥೆಯ ರಾಷ್ಟ್ರವಾಗಿರಬೇಕು" ಎಂದಿದ್ದಾರೆ.
"ನಮ್ಮ ಬೆಂಬಲಿಗರು ನಿರಾಸೆಗೊಂಡಿದ್ದು, ಈಗಷ್ಟೇ ನಮ್ಮ ಪ್ರಯಾಣ ಪ್ರಾರಂಭಗೊಂಡಿದೆ ಎನ್ನುವುದನ್ನು ಬೆಂಬಲಿಗರಿಗೆ ಹೇಳಲು ಬಯಸುತ್ತೇನೆ" ಎಂದು ತಿಳಿಸಿದ್ದಾರೆ.