ಬ್ರಿಸ್ಬೇನ್, ಜ.08 (DaijiworldNews/PY): ಆಸ್ಟ್ರೇಲಿಯಾದ ಬ್ರಿಸ್ಬೇಲ್ ನಗರದಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಶುಕ್ರವಾರದಿಂದ ಮೂರು ದಿನಗಳ ಕಾಲ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಇದೇ ಮೊದಲ ಬಾರಿಗೆ ಬ್ರಿಸ್ಬೇಲ್ ಹಾಗೂ ಸುತ್ತಮುತ್ತಲಿನ ಕೆಲವು ನಗರಗಳ ಸ್ಥಳೀಯ ಆಡಳಿತಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಕ್ವೀನ್ಸ್ಲ್ಯಾಂಡ್ನ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಈ ಬಗ್ಗೆ ಮಾತನಾಡಿದ ಕ್ವೀನ್ಸ್ಲ್ಯಾಂಡ್ ಮುಖ್ಯ ಆರೋಗ್ಯ ಅಧಿಕಾರಿ ಜೆನೆಟ್ ಯಂಗ್ ಅವರು, "ಶೇ.70ರಷ್ಟು ರೂಪಾಂತರಿ ಕೊರೊನಾ ವೈರಸ್ ಸಾಂಕ್ರಾಮಿಕವಾಗಿದೆ. ಈ ರೂಪಾಂತರಿ ಕೊರೊನಾ ವೈರಸ್ ಅನ್ನು ನಿಯಂತ್ರಿಸಲು ಬ್ರಿಟನ್ ಕಷ್ಟಪಡುತ್ತಿದೆ. ಈ ನಿಟ್ಟಿನಲ್ಲಿ ಈ ರೂಪಾಂತರಿ ಕೊರೊನಾ ವೈರಸ್ನ ವಿರುದ್ದ ಶೀಘ್ರವೇ ನಾವು ಕ್ರಮ ತೆಗೆದುಕೊಳ್ಳಬೇಕು" ಎಂದಿದ್ದಾರೆ.
"ಮಹಿಳೆಗೆ ಜ.2ರ ವೇಳೆಗೆ ಸೋಂಕು ತಗುಲಿರಬಹುದು. ಅವರಲ್ಲಿ ಕೆಲವು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ಹಿನ್ನೆಲೆ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು. ಈ ಸಂದರ್ಭ ಅವರಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಿಸ್ಬೇನ್ ಹೋಟೆಲ್ವೊಂದರಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿದ್ದ ಹಲವಾರು ಪ್ರಯಾಣಿಕರಿಗೆ ಕೊರೊನಾ ದೃಢಪಟ್ಟಿದ್ದು, ಆ ಪೈಕಿ ಸ್ವಚ್ಛತಾ ಸಿಬ್ಬಂದಿಯೋರ್ವರಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿತ್ತು.