ವಾಷಿಂಗ್ಟನ್, ಜ. 08 (DaijiworldNews/MB) : ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಅಮೇರಿಕಾ ಕ್ಯಾಪಿಟಲ್ಗೆ (ಸಂಸತ್) ನುಗ್ಗಿ ಪೊಲೀಸರೊಂದಿಗೆ ಸಂಘರ್ಷ ನಡೆಸಿರುವ ಅನಿರೀಕ್ಷಿತ ಘಟನೆ ಗುರುವಾರ ನಡೆದಿದ್ದು, ಈ ಘಟನೆಯ ಹಿನ್ನೆಲೆ ಪೊಲೀಸ್ ಮುಖ್ಯಸ್ಥ ಸ್ಟೀವನ್ ಸುಂಡ್ ಅವರು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಪೊಲೀಸ್ ವರಿಷ್ಠರು ಟ್ರಂಪ್ ಬೆಂಬಲಿಗರನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ತೀವ್ರ ಟೀಕೆಗಳು ಕೇಳಿಬಂದಿತ್ತು. ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಸೆನೆಟ್ ಡೆಮಾಕ್ರಾಟಿಕ್ ನಾಯಕ ಸೆನೆಟರ್ ಚುಕ್ ಸ್ಕುಮೆರ್ ಅವರು ಗುರುವಾರ ಪೊಲೀಸ್ ವರಿಷ್ಠರ ರಾಜೀನಾಮೆಗೆ ಒತ್ತಾಯಿಸಿದ್ದರು.
ಈ ಬೆನ್ನಲ್ಲೇ ಪೊಲೀಸ್ ಮುಖ್ಯಸ್ಥ ಸ್ಟೀವನ್ ಸುಂಡ್ ತಾನು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಯುಎಸ್ನ ಸಂಸತ್ ಪೊಲೀಸ್ ಮಂಡಳಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ದೊರೆತಿದ್ದೆ ನನಗೆ ಲಭಿಸಿದ ಗೌರವ ಎಂದು ಅವರು ಹೇಳಿದ್ದಾರೆ.
''ಅನಾರೋಗ್ಯ ಸಂಬಂಧ ಈಗಾಗಲೇ ಚರ್ಚೆ ನಡೆಸಿದಂತೆ 2021 ಜನವರಿ 17ರಿಂದ ರಜೆ ಮೇಲೆ ತೆರಳುತ್ತಿದ್ದು ಬಾಕಿ 440 ಗಂಟೆಗಳ ರಜೆಯನ್ನು ತೆಗೆದುಕೊಳ್ಳಲಿದ್ದೇನೆ'' ಎಂದು ತಿಳಿಸಿದ್ದಾರೆ.