ವಾಷಿಂಗ್ಟನ್, ಜ.09 (DaijiworldNews/PY): "ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಅಮೇರಿಕಾ ಕ್ಯಾಪಿಟಲ್ಗೆ (ಸಂಸತ್) ನುಗ್ಗಿ ನಡೆಸಿರುವ ಸಂಘರ್ಷಕ್ಕೆ ಇನ್ನಷ್ಟು ಪ್ರಚೋದನೆ ನೀಡುವಂತ ಅಪಾಯವಿದೆ ಎಂದು ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ" ಎಂದು ಟ್ವಿಟ್ಟರ್ ಹೇಳಿದೆ.
"ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯಿಂದ ಮಾಡಲಾದ ಟ್ವೀಟ್ಗಳನ್ನು ಹಾಗೂ ಸನ್ನಿವೇಶಗಳನ್ನು ಪರಿಶೀಲಿಸಿದ ನಂತರ ಗಲಭೆಗೆ ಇನ್ನಷ್ಟು ಪ್ರಚೋದನೆ ನೀಡುವ ಅಪಾಯದಿಂದಾಗಿ ನಾವು ಎಂದು ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದ್ದೇವೆ" ಎಂದು ಟ್ವಿಟ್ಟರ್ ಟ್ವೀಟ್ ಮೂಲಕ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡೊನಾಲ್ಡ್ ಟ್ರಂಪ್, "ಟ್ವಿಟ್ಟರ್ ರಾಜಕೀಯ ಶತ್ರುಗಳ ಜೊತೆ ಸೇರಿ ತನ್ನನ್ನು ಮೌನವಾಗಿರಿಸಲು ಸಂಚು ಮಾಡಿದೆ" ಎಂದು ಆರೋಪಿಸಿದ್ದಾರೆ.
"ವಾಕ್ ಸ್ವಾತಂತ್ರ್ಯವನ್ನು ಟ್ವಿಟ್ಟರ್ ನಿಷೇಧಿಸಿದೆ. ಈ ಎಲ್ಲಾ ಹಿನ್ನೆಲೆ ನಿಕಟವಾದ ಭವಿಷ್ಯದಲ್ಲೇ ತಮ್ಮ ಮಾತನ್ನು ಜನರಿಗೆ ತಲುಪಿಸುವ ಸಲುವಾಗಿ ತಮ್ಮದೇ ಆದ ಫ್ಲ್ಯಾಟ್ಫಾರ್ಮ್ವೊಂದನ್ನು ನಿರ್ಮಾಣ ಮಾಡುತ್ತೇನೆ" ಎಂದಿದ್ದಾರೆ.
"ಈ ಬಗ್ಗೆ ಶೀಘ್ರವೇ ದೊಡ್ಡ ಪ್ರಕಟಣೆಯನ್ನು ಮಾಡಲಿದ್ದೇವೆ. ಮುಂಬರುವ ದಿನಗಳಲ್ಲಿ ನಮ್ಮದೇ ಆದ ವೇದಿಕೆಯನ್ನು ನಿರ್ಮಾಣ ಮಾಡುವ ಸಾಧ್ಯತೆಯನ್ನು ನಿರೀಕ್ಷಿಸುತ್ತೇವೆ. ಎಂದಿಗೂ ಕೂಡಾ ನಮ್ಮನ್ನು ಮೌನವಾಗಿರಿಸಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.
ಟ್ರಂಪ್ ಅವರ ವೈಯುಕ್ತಿಕ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ತೆಗೆದುಹಾಕಿದ ಬೆನ್ನಲ್ಲೇ ಟೀಮ್ ಟ್ರಂಪ್ ಅಭಿಯಾನದ ಹಾಗೂ ಪೊಟಸ್ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲು ಆರಂಭಿಸಿದ್ದು, ಆದರೆ, ಟ್ವಿಟ್ಟರ್ ಟೀಮ್ ಟ್ರಂಪ್ ಖಾತೆಯನ್ನು ಅಮಾನತು ಮಾಡಿದೆ. ಅಲ್ಲದೇ, ಪೊಟಸ್ ಖಾತೆಯಿಂದಲೂ ಕೂಡಾ ಎಲ್ಲಾ ಟ್ವೀಟ್ಗಳನ್ನು ಅಳಿಸಿದೆ.