ವಾಷಿಂಗ್ಟನ್, ಜ.09 (DaijiworldNews/PY): "ಡೊನಾಲ್ಡ್ ಟ್ರಂಪ್ ಅವರು ಕೂಡಲೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದೇ ಇದ್ದಲ್ಲಿ, ಸಂಸತ್ ಭವನಕ್ಕೆ ನುಗ್ಗಿದ್ದ ಜನಸಮೂಹಕ್ಕೆ ಪ್ರೋತ್ಸಾಹ ನೀಡಿದ್ದಾರೆ ಎನ್ನುವ ದೋಷಾರೋಪಣೆ ಹೊರಿಸಲಾಗುವುದು" ಎಂದು ಅಮೆರಿಕದ ಸಂಸತ್ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ತಿಳಿಸಿದ್ದಾರೆ.
"ಸಂಸತ್ ಭವನದ ಮೇಲಿನ ದಾಳಿಯ ಬಳಿಕ ಡೆಮಾಕ್ರಟಿಕ್ ಪಕ್ಷದ ಸಂಸದರು ಸೇರಿದಂತೆ ವಿವಿಧ ನಾಯಕರು ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷ ಹುದ್ದೆಯಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
"ತಾವಾಗಿಯೇ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವುದು ಸದಸ್ಯರ ಆಶಯ. ಒಂದು ವೇಳೆ ಇದು ಆಗದಿದ್ದಲ್ಲಿ, ಸಂವಿಧಾನದ 25ನೇ ತಿದ್ದುಪಡಿಯ ಅಸ್ತ್ರ ಹಾಗೂ ದೋಷಾರೋಪಣೆ ತೀರ್ಮಾನದೊಂದಿಗೆ ಮುಂದುವರಿಯಲುನಿಯಮಗಳ ಸಮಿತಿಗೆ ಸೂಚನೆ ನೀಡಿದ್ದೇನೆ" ಎಂದಿದ್ದಾರೆ.
"ಶೀಘ್ರವೇ ದೋಷಾರೋಪಣೆ ಪ್ರಕ್ರಿಯೆಯನ್ನು ಆರಂಭಿಸಬೇಕು" ಎಂದು ಭಾರತೀಯ ಮೂಲದ ಅಮೆರಿಕನ್ ಸಂಸದೆ ಪ್ರಮೀಳಾ ಜಯಪಾಲ್ ಹೇಳಿದ್ದಾರೆ.
"ಅಮೇರಿಕಾ ಸುರಕ್ಷತೆಯ ದೃಷ್ಟಿಯಲ್ಲಿ ಇನ್ನೊಂದು ದಿನ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿರುವುದು ಅಪಾಯ" ಎಂದು ಸಂಸದೆ ಕೆ. ಕಹಲೆ ತಿಳಿಸಿದ್ದಾರೆ.