ಜಕಾರ್ತ, ಜ.10 (DaijiworldNews/PY): ಇಂಡೋನೇಶಿಯಾದ ರಾಜಧಾನಿ ಜಕಾರ್ತದಲ್ಲಿ ಬಳಿಯ ಜಾವಾ ಸಮದ್ರದಲ್ಲಿ ಪತನಗೊಂಡಿದ್ದ ವಿಮಾನ ಅವಶೇಷಗಳನ್ನು ಹುಡುಕುತ್ತಿರುವ ರಕ್ಷಣಾ ಸಿಬ್ಬಂದಿಗಳಿಗೆ ರವಿವಾರ ಬೆಳಗ್ಗೆ ಬಟ್ಟೆ ತುಂಡುಗಳು, ಲೋಹದ ತುಣುಕುಗಳು ದೊರೆತಿವೆ.
ಈ ಬಗ್ಗೆ ಇಂಡೋನೇಶಿಯಾ ರಾಷ್ಟ್ರೀಯ ರಕ್ಷಣಾ ಸಂಸ್ಥೆಯು ಅಧಿಕೃತ ಹೇಳಿಕೆ ನೀಡಿದ್ದು, ಲೋಹದ ತುಣುಕುಗಳು, ಬಟ್ಟೆ ತುಂಡುಗಳು, ದೇಹದ ಭಾಗಗಳು ಜಾವಾ ಸಮುದ್ರದಲ್ಲಿ ದೊರೆತಿವೆ. ಇವುಗಳು ಲಂಕಾಂಗ್ ದ್ವೀಪ ಹಾಗೂ ಲಕಿ ದ್ವೀಪದ ಮಧ್ಯೆ ಪತ್ತೆಯಾಗಿವೆ ಎಂದು ತಿಳಿಸಿದೆ.
ಶ್ರೀವಿಜಯ ಏರ್ ಏರ್ಲೈನ್ ಕಂಪನಿಯ ವಿಮಾನವೊಂದು ಜಕರ್ತದಿಂದ ಹೊರಟಿದ್ದು, ಟೇಕ್ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನವಾಗಿದ್ದು, 50 ಪ್ರಯಾಣಿಕರು ಸೇರಿದಂತೆ 12 ಸಿಬ್ಬಂದಿಗಳು ವಿಮಾನದಲ್ಲಿದ್ದರು.
ದೇಶೀಯ ವಿಮಾನ ಬೋಯಿಂಗ್ 737-500 ಜಕಾರ್ತಾದಿಂದ ಮಧ್ಯಾಹ್ನ 1:56 ಕ್ಕೆ ಟೇಕ್ ಆಫ್ ಆಗಿತ್ತು. ಸರಿಸುಮಾರು ಒಂದು ಗಂಟೆಯ ಪ್ರಯಾಣ ಮುಗಿಸಿದ ಬಳಿಕ ವಿಮಾನ ಸಂಪರ್ಕ ಕಳೆದುಕೊಂಡಿದೆ. ಮಧ್ಯಾಹ್ನ 2:40 ಕ್ಕೆ ವಿಮಾನ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿದ್ದು, ವಿಮಾನ ಸುಮಾರು 10000 ಅಡಿ ಮೇಲೆ ಹಾರುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ರಡಾರ್ನೊಂದಿಗೆ ಸಂಪರ್ಕ ಕಡಿದುಕೊಂಡಿತ್ತು.