ಬೀಜಿಂಗ್, ಜ.11 (DaijiworldNews/PY): "ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡವು ಜ.14ರ ಗುರುವಾರದಂದು ಕೊರೊನಾ ವೈರಸ್ ಸಾಂಕ್ರಾಮಿಕದ ಮೂಲದ ಬಗ್ಗೆ ತನಿಖೆ ನಡೆಸುವ ಸಲುವಾಗಿ ದೇಶಕ್ಕೆ ಆಗಮಿಸಲಿದೆ" ಎಂದು ಚೀನಾ ಸರ್ಕಾರ ಹೇಳಿದೆ.
ಈ ಬಗ್ಗೆ ಚೀನಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು," ಜ.14ರಂದು ವಿಶ್ವ ಆರೋಗ್ಯ ತಂಡ ಚೀನಾಕ್ಕೆ ಆಗಮಿಸಲಿದೆ. ಮೊದಲು ವುಹಾನ್ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ" ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿರುವುದಾಗಿ ವರದಿ ಮಾಡಿದೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಉಪ ಮುಖ್ಯಸ್ಥ ಝೆಂಗ್ ಯಿಕ್ಸಿನ್ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, "ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡವು ಜ.14ರಂದು ಯಾವ ಸಮಯಕ್ಕೆ ಚೀನಾಕ್ಕೆ ಆಗಮಿಸಲಿದೆ ಎನ್ನುವ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೆ, ಪರಿಶೀಲನೆ ನಡೆಸುವ ಹಿನ್ನೆಲೆ ನಾಲ್ಕು ವಿಡಿಯೋ ಕಾನ್ಫರೆನ್ಸ್ ಸೇರಿ ನಿಗದಿತವಾದ ವ್ಯವಸ್ಥೆಗಳನ್ನು ಕೈಗೊಂಡಿದ್ದೇವೆ" ಎಂದಿದ್ದಾರೆ.
"ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ತಮ್ಮ ತಂಡದ ಪ್ರವಾಸ ಹಾಗೂ ಕಾರ್ಯಕ್ರಮದ ಬಗ್ಗೆ ವಿವರಗಳನ್ನು ಅಂತಿಮಗೊಳಿಸಿದ ಬಳಿಕ ಚೀನಾದಲ್ಲಿರುವ ತಂಡವು ವುಹಾನ್ಗೆ ತೆರಳಿ ಪರಿಶೀಲನೆ ನಡೆಸಲಿದೆ" ಎಂದು ತಿಳಿಸಿದ್ದಾರೆ.