ಅಲಾಮೊ, ಜ. 13 (DaijiworldNews/MB) : ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಅಮೇರಿಕಾ ಕ್ಯಾಪಿಟಲ್ಗೆ (ಸಂಸತ್) ದಾಂದಲೆ ನಡೆಸಿರುವುದಕ್ಕೆ ತಾನು ಹೊಣೆಗಾರನಲ್ಲ ಎಂದು ಹೇಳಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಾಳಿಗೂ ಮುನ್ನ ತಾವು ಮಾಡಿದ ಭಾಷಣವನ್ನು ಸಮರ್ಥಿಸಿದ್ದಾರೆ.
ಜನವರಿ ಏಳರಂದು ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಈ ದಾಂದಲೆ ನಡೆಸಿದ್ದು ಇದಕ್ಕೂ ಮುಂಚಿನ ದಿನ ಜ. 6ರಂದು ಟ್ರಂಪ್ ಮಾಡಿದ ಭಾಷಣಕ್ಕಾಗಿ ಅಮೇರಿಕಾದ ಪ್ರಜಾಪ್ರತಿನಿಧಿ ಸಭೆ ಬುಧವಾರ ಎರಡನೇ ಬಾರಿಗೆ ಟ್ರಂಪ್ಗೆ ವಾಗ್ದಂಡನೆ ವಿಧಿಸಲು ಮುಂದಾಗಿದೆ.
ಟ್ರಂಪ್ ತನ್ನ ಭಾಷಣದಲ್ಲಿ, ನಾನೇ ನವೆಂಬರ್ ಚುನಾವಣೆಯ ವಿಜೇತ, ಬೆಂಬಲಿಗರು ಸಂಸತ್ತಿನೆಡೆಗೆ ಜಾಥಾ ನಡೆಸಿ ಎಂದು ಕರೆ ನೀಡಿದ್ದರು. ಈ ಕರೆಯ ಬೆನ್ನಲ್ಲೇ ಜನವರಿ 7 ರಂದು ಟ್ರಂಪ್ ಬೆಂಬಲಿಗರು, ಸಂಸತ್ಗೆ ನುಗ್ಗಿದ್ದು ಪೊಲೀಸರೊಂದಿಗೆ ಸಂಘರ್ಷ ನಡೆಸಿದ್ದಾರೆ. ಇದರಿಂದಾಗಿ ಜೋ ಬಿಡೆನ್ ಅವರ ಗೆಲುವು ದೃಢೀಕರಣ ಸಮಾರಂಭವನ್ನು ತಾತ್ಕಾಲಿಕವಾಗಿ ಸಂಸತ್ ಮುಂದೂಡಬೇಕಾಯಿತು.
ತನ್ನ ಭಾಷಣವನ್ನು ಸಮರ್ಥಿಸಿಕೊಂಡಿರುವ ಟ್ರಂಪ್, "ನನ್ನ ಭಾಷಣ ಸರಿಯಾಗಿತ್ತು ಎಂದು ಎಲ್ಲರಿಗೂ ತಿಳಿದಿದೆ. ನನ್ನ ವಿರುದ್ಧದ ವಾಗ್ದಂಡನೆ ಪ್ರಸ್ತಾಪ ರಾಜಕೀಯ ಪಿತೂರಿ" ಎಂದು ಹೇಳಿದರು. "ನನ್ನ ಬೆಂಬಲಿಗರು ಹಿಂಸಾಮಾರ್ಗವನ್ನು ಅನುಸರಿಸಬಾರದು, ಇಂಥ ಆಕ್ರೋಶವನ್ನು ನಾನು ಎಂದೂ ನೋಡಿಲ್ಲ" ಎಂದು ಕೂಡಾ ಹೇಳಿದರು.