ವಾಷಿಂಗ್ಟನ್, ಜ.14 (DaijiworldNews/HR): ಕ್ಯಾಪಿಟಲ್ ಮೇಲೆ ಕಳೆದ ವಾರ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯನ್ನು ಪೂರ್ವನಿಯೋಜಿತ ಮತ್ತು ಉಗ್ರ ಸಂಘಟಿತ ಕೃತ್ಯವೆಂದು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಪ್ರತಿಪಾದಿಸಿದ್ದು, ಈ ಹಿಂಸಾಚಾರಕ್ಕೆ ಟ್ರಂಪ್ ಪ್ರಚೋದನೆ ನೀಡಿದ್ದಾರೆ ಎಂದೂ ಆರೋಪಿಸಿದ್ದಾರೆ.
ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಡೆನ್, "ನಮ್ಮ ಪ್ರಜಾಪ್ರಭುತ್ವದ ಮೇಲೆ ಕಳೆದ ವಾರ ಅನಾಗರಿಕ ದಾಳಿ ನಡೆಸಿದ್ದನ್ನು ನಾವು ನೋಡಿದ್ದೇವೆ. ಇದು ನಮ್ಮ ರಾಷ್ಟ್ರದ 244 ವರ್ಷಗಳ ಇತಿಹಾಸದಲ್ಲಿ ಕಂಡು ಕೇಳರಿಯದ ಕೃತ್ಯವಾಗಿತ್ತು" ಎಂದರು.
ಇನ್ನು "ಈ ಹಿಂಸಾಚಾರಕ್ಕೆ ಡೊನಾಲ್ಡ್ ಟ್ರಂಪ್ ಪ್ರಚೋದಿಸಿದ್ದು, ಕ್ಯಾಪಿಟಲ್ ಮೇಲೆ ನಡೆದ ದಾಳಿಯನ್ನು ಪೂರ್ವನಿಯೋಜಿತ ಮತ್ತು ಸಂಘಟಿತ ಕೃತ್ಯವಾಗಿತ್ತು. ಇದನ್ನು ರಾಜಕೀಯ ಉಗ್ರಗಾಮಿಗಳು ಮತ್ತು ಆಂತರಿಕ ಭಯೋತ್ಪಾದಕರು ನಡೆಸಿದ್ದಾರೆ. ಈ ಹಿಂಸಾಚಾರಕ್ಕೆ ಟ್ರಂಪ್ ಪ್ರಚೋದಿಸಿದ್ದರು" ಎಂದು ಆರೋಪಿಸಿದ್ದಾರೆ.