ವಾಷಿಂಗ್ಟನ್, ಜ.15 (DaijiworldNews/PY): ಜ.6ರಂದು ಅಮೇರಿಕಾ ಕ್ಯಾಪಿಟಲ್ (ಸಂಸತ್) ಮೇಲೆ ನಡೆದ ದಾಳಿ ಹಾಗೂ ಅಪರಾಧ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ 100ಕ್ಕೂ ಅಧಿಕ ಜನರನ್ನು ಬಂಧಿಸಿರುವುದಾಗಿ ಎಫ್ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಹೇಳಿದ್ದಾರೆ.
ಜ.20ರಂದು ಚುನಾಯಿತ ಅಧ್ಯಕ್ಷ ಜೊ ಬಿಡೆನ್ ಅವರ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿರುವ ಹಿನ್ನೆಲೆ ಸಾಮಾಜಿಕ ಜಾಲತಾಣಗಳ ಮುಖೇನ ವಿನಿಮಯವಾಗುವ ವಿಷಯಗಳ ಹಾಗೂ ಚರ್ಚೆಗಳ ಬಗ್ಗೆಯೂ ನಿಗಾವಹಿಸಲಾಗಿದೆ ಎಂದಿದ್ದಾರೆ.
ಉಪಾಧ್ಯಕ್ಷ ಮೈಕ್ ಪೆನ್ಸ್ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಕ್ರಿಸ್ಟೋಫರ್, "ಕಳೆದ ವಾರ ಅಮೇರಿಕಾ ಸಂಸತ್ತಿನ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮುಂದುವರೆಸಿದ್ದೇವೆ. ಈ ಕ್ರಮದಿಂದಾಗಿ ಮುಂದೆ ಈ ರೀತಿಯಾದ ಚಟುವಟಿಕೆಗಳು ಮರುಕಳಿಸಬಾರದು. ಅಲ್ಲದೇ, ಇಂತಹ ಚಟುವಟಿಕೆಗಳು ಪುನರಾವರ್ತನೆ ಆಗುವುದು ಕೂಡಾ ತಪ್ಪುತ್ತದೆ. ಈ ರೀತಿಯಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಇದೊಂದು ಎಚ್ಚರಿಯಾಗಿದೆ" ಎಂದು ತಿಳಿಸಿದ್ದಾರೆ.
"ಕಳೆದ ವಾರ ಅಮೇರಿಕಾ ಸಂಸತ್ತಿನಲ್ಲಾದ ಹಿಂಸಾಚಾರವನ್ನು ಪುನರಾವರ್ತಿಸುವ ವ್ಯಕ್ತಿಗಳ ಮೇಲೆ ಎಫ್ಬಿಐ ನಿಗಾ ಇಟ್ಟಿದೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾವು 200ಕ್ಕೂ ಅಧಿಕ ಶಂಕಿತರನ್ನು ಗುರುತಿಸಿದ್ದು, ಆ ವ್ಯಕ್ತಿಗಳು ಯಾರೆಂದು ನಮಗೆ ತಿಳಿದಿದೆ" ಎಂದಿದ್ದಾರೆ.
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಜಯ ಗಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಟ್ರಂಪ್ ಬೆಂಬಲಿಗರು ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ ಭದ್ರತೆ ಉಲ್ಲಂಘನೆ ಮಾಡಿ ಕ್ಯಾಪಿಟಲ್ ಕಟ್ಟಡ್ಡಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದರು. ಈ ಸಂದರ್ಭದಲ್ಲಿ ಅಮೇರಿಕಾ ಕಾಂಗ್ರೆಸ್ನ ಅನೇಕ ಅಧಿಕಾರಿಗಳು ಕೂಡಾ ಗಾಯಗೊಂಡಿದ್ದರು.