ವಾಷಿಂಗ್ಟನ್, ಜ.16 (DaijiworldNews/PY): ಭಾರತೀಯ-ಅಮೇರಿಕನ್ ಸಮೀರಾ ಫಾಝಿಲಿ ಅವರನ್ನು ಅಮೇರಿಕಾ ಚುನಾಯಿತ ಅಧ್ಯಕ್ಷ ಜೊ ಬಿಡೆನ್ ಅವರು ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿ ನೇಮಕ ಮಾಡಿದ್ದಾರೆ.
ಜೊ ಬಿಡೆನ್-ಕಮಲಾ ಹ್ಯಾರಿಸ್ ಅವರ ಅಧಿಕಾರ ಹಸ್ತಾಂತರ ಪ್ರಕ್ರಿಯೆ ತಂಡವು ಸಮೀರಾ ಫಾಝಿಲಿ ಅವರ ನೇಮಕವನ್ನು ಶುಕ್ರವಾರ ಪ್ರಕಟಿಸಿದೆ.
ಪ್ರಸ್ತುತ ಫಾಝಿಲಿ ಅವರು ಜೊ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಅವರ ಅಧಿಕಾರ ಹಸ್ತಾಂತರ ತಂಡದಲ್ಲಿ ಆರ್ಥಿಕ ತಂಡದ ಭಾಗವಾಗಿದ್ದಾರೆ.
ಫಾಝಿಲಿ ಅವರನ್ನು ಅಟ್ಲಾಂಟಾದ ಫೆಡರಲ್ ರಿಸರ್ವ್ ಬ್ಯಾಂಕ್ಗೆ ನೇಮಕ ಮಾಡಲಾಗಿದ್ದು, ಅಲ್ಲಿ ಅವರು ಸಮುದಾಯ ಹಾಗೂ ಆರ್ಥಿಕ ಅಭಿವೃದ್ದಿ ವಿಭಾಗದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ಜೊ ಬಿಡೆನ್ ಅವರ ಆಡಳಿತದಲ್ಲಿ ಮುಖ್ಯವಾದ ಹುದ್ದೆಯನ್ನು ಅಲಂಕರಿಸಿದ ಎರಡನೇ ಕಾಶ್ಮೀರ ಮೂಲದ ಭಾರತೀಯ ಅಮೇರಿಕನ್ ಇವರಾಗಿದ್ದಾರೆ. ಡಿಸೆಂಬರ್ನಲ್ಲಿ ಕಾಶ್ಮೀರ ಮೂಲದ ಭಾರತೀಯ- ಅಮೆರಿಕನ್ ಆಶಾ ಸಿಂಗ್ ಅವರನ್ನು ಇದೇ ರೀತಿಯಾದ ಪ್ರಮುಖ ಹುದ್ದೆಗೆ ನೇಮಕ ಮಾಡಲಾಗಿತ್ತು.