ಕಾಬೂಲ್, ಜ.17 (DaijiworldNews/PY): ಸುಪ್ರೀಂಕೋರ್ಟ್ನ ಇಬ್ಬರು ಮಹಿಳಾ ನ್ಯಾಯಮೂರ್ತಿಗಳನ್ನು ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ರವಿವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಅಫ್ಘಾನಿಸ್ತಾನದಲ್ಲಿ ತನ್ನ ಸೈನಿಕರ ಸಂಖ್ಯೆಯನ್ನು 2,500ಕ್ಕೆ ಇಳಿಕೆ ಮಾಡುವುದಾಗಿ ಇತ್ತೀಚೆಗೆ ಅಮೇರಿಕ ತಿಳಿಸಿತ್ತು. ಈ ವಿಚಾರದ ಬೆನ್ನಲ್ಲೇ ಸುಪ್ರೀಂಕೋರ್ಟ್ನ ಇಬ್ಬರು ಮಹಿಳಾ ನ್ಯಾಯಮೂರ್ತಿಗಳನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ.
"ಮಹಿಳಾ ನ್ಯಾಯಮೂರ್ತಿಗಳು ನ್ಯಾಯಾಲಯದ ಕಾರಿನಲ್ಲಿ ಕಚೇರಿಗೆ ಬರುತ್ತಿದ್ದ ಸಂದರ್ಭ ಈ ದಾಳಿ ನಡೆದಿದೆ. ನಾವು ಇಬ್ಬರು ನ್ಯಾಯಮೂರ್ತಿಗಳನ್ನು ಕಳೆದುಕೊಂಡಿದ್ದೇವೆ. ಗುಂಡಿನ ದಾಳಿ ನಡೆಸಿದ ಸಂದರ್ಭ ಕಾರಿನ ಚಾಲಕನಿಗೂ ಗಾಯಗಳಾಗಿವೆ" ಎಂದು ಸುಪ್ರೀಂಕೋರ್ಟ್ ವಕ್ತಾರ ಅಹಮದ್ ಫಹೀಮ್ ಖವೀಮ್ ಹೇಳಿದ್ದಾರೆ.
ಅಲ್ಲಿನ ಸರ್ಕಾರ ಹಾಗೂ ತಾಲಿಬಾನ್ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದರೂ ಕೂಡಾ ಅಫ್ಘಾನಿಸ್ತಾನದಲ್ಲಿ ಕೆಲ ತಿಂಗಳಿನಿಂದ ಹಿಂಸಾತ್ಮಕ ದಾಳಿಗಳು ನಡೆಯುತ್ತಿವೆ. ಕಾಬೂಲ್ನಲ್ಲಿ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ.