ಸ್ಯಾನ್ ಡಿಯಾಗೊ, ಜ.17 (DaijiworldNews/PY): ಚುನಾಯಿತ ಅಧ್ಯಕ್ಷ ಜೊ ಬಿಡೆನ್ ಅವರು, ಅಮೇರಿಕಾದಲ್ಲಿನ 1.1 ಕೋಟಿ ವಲಸಿಗರಿಗೆ ಕಾನೂನಿನ ಸ್ಥಾನಮಾನ ನೀಡಲು ಮುಂದಾಗಿದ್ದಾರೆ.
ಅಮೇರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಈ ವಿಚಾರದ ಬಗ್ಗೆ ಮೊದಲ ಆದ್ಯತೆಯಾಗಲಿದೆ. ವಲಸಿಗರಿಗೆ ಕಾನೂನಿನ ಸ್ಥಾನಮಾನ ನೀಡುವ ಸಲುವಾಗಿ ಸಂಸತ್ ಸದಸ್ಯರಲ್ಲೂ ಕೂಡಾ ಮನವಿ ಮಾಡಲಿದ್ದಾರೆ. ಜೊ ಬಿಡೆನ್ ಅವರ ಈ ತೀರ್ಮಾನಕ್ಕೆ ವಕೀಲರ ಸಮುದಾಯವು ಕೂಡಾ ಆಶ್ಚರ್ಯ ವ್ಯಕ್ತಪಡಿಸಿದೆ.
"ಅಧಿಕಾರ ಸ್ವೀಕರಿಸಿದ ಮೊದಲ ದಿನದಂದೇ ಲಕ್ಷಾಂತರ ವಲಸಿಗರಿಗೆ ಪೌರತ್ವ ನೀಡುವ ವಿಚಾರದ ಬಗ್ಗೆ ಜೊ ಬಿಡೆನ್ ಅವರು ಮಹತ್ವವಾದ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆ ಇದೆ" ಎಂದು ಬಿಡೆನ್ ಅವರ ಆಪ್ತರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಡೆನ್ ಅವರ ಸಿಬ್ಬಂದಿ ಮುಖ್ಯಸ್ಥ ರೊನ್ ಕ್ಲೈನ್ ಅವರು, "ಅಮೇರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಂದೇ ಮಸೂದೆಯನ್ನು ಸಂಸತ್ಗೆ ಕಳುಹಿಸುವ ಪ್ರತಿಕ್ರಿಯೆಯನ್ನು ನೂತನ ಅಧ್ಯಕ್ಷರು ತೆಗೆದುಕೊಳ್ಳಲಿದ್ದಾರೆ" ಎಂದಿದ್ದಾರೆ.
"ಬರಾಕ್ ಒಬಾಮಾ ಅವರು ಅಧ್ಯಕ್ಷರಾಗಿದ್ದ ಸಂದರ್ಭ ವಲಸೆ ಮಸೂದೆಯ ವಿಚಾರವಾಗಿ ಹಲವು ಬಾರಿ ಪ್ರಸ್ತಾಪಿಸಿದ್ದರು. ಆದರೆ, ಅವರ ಆಡಳಿತದ ಸಂದರ್ಭ ವಲಸೆ ಮಸೂದೆ ಅನುಷ್ಠಾನವಾಗಲಿಲ್ಲ" ಎಂದಿದ್ದಾರೆ.
"ಡೊನಾಲ್ಡ್ ಟ್ರಂಪ್ ಅವರ ವಲಸೆ ವಿರೋಧಿ ಕಾರ್ಯಸೂಚಿಗೆ ವಿರುದ್ದವಾಗಿ ನೂತನ ನೀತಿ ಜಾರಿಯಾಗುವ ಸಾಧ್ಯತೆ ಇದೆ. ದಾಖಲೆಗಳು ಇಲ್ಲದೆಯೇ ಸದ್ಯ ಅಮೇರಿಕಾದಲ್ಲಿರುವವರಿಗೆ ಪೌರತ್ವ ನೀಡುವುದು ಮಹತ್ವದ ವಿಚಾರವಾಗಿದೆ" ಎಂದು ರಾಷ್ಟ್ರೀಯ ವಲಸೆ ಕಾನೂನು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಮರಲೆನಾ ಹಿಂಕಾಪಿ ತಿಳಿಸಿದ್ದಾರೆ.