ಸಿಯೋಲ್, ಜ. 18 (DaijiworldNews/MB) : ''ಅಮೇರಿಕಾ ಮತ್ತು ಉತ್ತರ ಕೊರಿಯಾದ ರಾಜತಾಂತ್ರಿಕ ಸಂಬಂಧದ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಅನುಭವಿಸಿದ ವೈಫಲ್ಯಗಳಿಂದ ಬಿಡೆನ್ ಮುಂದೆ ಹೆಜ್ಜೆ ಇಡಬೇಕು'' ಎಂದು ಅಮೇರಿಕಾದ ಚುನಾಯಿತ ಅಧ್ಯಕ್ಷ ಜೋ ಬಿಡೆನ್ಗೆ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ತಿಳಿಸಿದ್ದಾರೆ.
ಮೂನ್ ಜೆ ಇನ್ ಉತ್ತರ ಕೊರಿಯಾದ ನಾಯಕ ಅಧ್ಯಕ್ಷ ಕಿಮ್ ಜೊಂಗ್ ಉನ್ ಮತ್ತು ಟ್ರಂಪ್ ಅವರ ನಡುವೆ ಮೂರು ಶೃಂಗಸಭೆಗಳನ್ನು ಆಯೋಜಿಸಲು ಲಾಬಿ ಮಾಡಿದ್ದರು. ಆದರೆ ಉತ್ತರ ಕೊರಿಯಾ ಮತ್ತು ಅಮೇರಿಕಾದ ಮಧ್ಯೆ ನಡೆದ ಪರಮಾಣು ನಿಶಸ್ತ್ರೀಕರಣ ಬಗೆಗಿನ ಮಾತುಕತೆ ಯಶಸ್ವಿಯಾಗದ ಹಿನ್ನೆಲೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕತೆ ಸ್ಥಗಿತಗೊಂಡಿತು.
ಈ ವಿಚಾರದಲ್ಲಿ ಟ್ರಂಪ್ಗಿಂತ ಬಿಡೆನ್ ಬೇರೆ ವಿಧಾನಗಳನ್ನು ಪಾಲಿಸುವ ಸಾಧ್ಯತೆ ಇದೆ ಎಂದು ಮೂನ್ ಒಪ್ಪಿಕೊಂಡರೂ, ಉತ್ತರ ಕೊರಿಯಾ ನಿಭಾಯಿಸುವಲ್ಲಿ ಟ್ರಂಪ್ ಆಡಳಿತದ ರಾಜತಾಂತ್ರಿಕ ವೈಫಲ್ಯಗಳಿಂದ ಜೊ ಬಿಡೆನ್ ಆಡಳಿತ ಪಾಠ ಕಲಿಯಬೇಕಾಗಿದೆ ಎಂದರು.