ವಾಷಿಂಗ್ಟನ್, ಜ.19 (DaijiworldNews/PY): ಡೊನಾಲ್ಡ್ ಟ್ರಂಪ್ ಅವರು, ಯುರೋಪ್ ಹಾಗೂ ಬ್ರೆಜಿಲ್ನಿಂದ ಅಮೇರಿಕಾ ಪ್ರವೇಶಕ್ಕೆ ಹೇರಿರುವ ಪ್ರಯಾಣದ ನಿರ್ಬಂಧವನ್ನು ಜ.26ಕ್ಕೆ ಕೊನೆಗೊಳಿಸಿದ್ದು, ಆದರೆ, ಅಮೇರಿಕಾದ ನೂತನ ಚುನಾಯಿತ ಅಧ್ಯಕ್ಷರಾದ ಜೊ ಬಿಡೆನ್ ಅವರು ಈ ನಿರ್ಬಂಧಗಳನ್ನು ವಿಸ್ತರಿಸಲು ಯೋಜಿಸಿರುವುದಾಗಿ ಜೊ ಬಿಡೆನ್ ಅವರ ವಕ್ತಾರರು ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೊರೊನಾ ವೈರಸ್ ಟಾಸ್ಕ್ ಫೋರ್ಸ್ ಸದಸ್ಯರು ಸೇರಿದಂತೆ ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ಬೆಂಬಲದೊಂದಿಗೆ ಕಳೆದ ವರ್ಷದ ಪ್ರಾರಂಭದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆಗೆದುಹಾಕುವಂತ ಆದೇಶಕ್ಕೆ ಸೋಮವಾರ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಡೆನ್ ವಕ್ತಾರೆ ಜೆನ್ ಸಾಕಿ, "ಆಡಳಿತವು ನಮ್ಮ ವೈದ್ಯಕೀಯ ತಂಡದ ಸಲಹೆಯ ಮೇರೆಗೆ ಜ.26ರಂದು ಈ ನಿರ್ಬಂಧಗಳನ್ನು ತೆಗೆಹಾಕುವ ಯಾವುದೇ ಉದ್ದೇಶವನ್ನು ಹೊಂದಿಲ್ಲ" ಎಂದು ತಿಳಿಸಿದ್ದಾರೆ.
"ಸಾಂಕ್ರಾಮಿಕ ರೋಗವು ಮತ್ತಷ್ಟು ವ್ಯಾಪಿಸುತ್ತಿರುವ ಕಾರಣ ಹಾಗೂ ಜಗತ್ತಿನಾದ್ಯಂತ ರೂಪಾಂತರಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿರುವ ಕಾರಣ ಅಂತರಾಷ್ಟ್ರೀಯ ಪ್ರಯಾಣದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆಗೆದುಹಾಕಲು ಇದು ಸೂಕ್ತ ಸಮಯವಲ್ಲ" ಎಂದಿದ್ದಾರೆ.
ಅಮೇರಿಕಾದ ನೂತನ ಅಧ್ಯಕ್ಷರಾಗಿ ಜೊ ಬಿಡೆನ್ ಅವರು ಅಧಿಕಾರಕ್ಕೇರುವವರೆಗೆ ಟ್ರಂಪ್ ಅವರು ನೀಡಿರುವ ಆದೇಶದ ಪ್ರಕಾರ ನೂತನ ಕೊರೊನಾ ಪರೀಕ್ಷೆ ಮಾಡುವ ಹಾಗೂ ಅದೇ ದಿನ ಅಂತರಾಷ್ಟ್ರೀಯ ಪ್ರಯಾಣದ ಮೇಲೆ ಹೇರಿದ್ದ ನಿರ್ಬಂಧ ಕೊನೆಯಾಗಲಿದೆ.
ಬುಧವಾರದಂದು ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.