ಲಾಸ್ ಏಂಜಲೀಸ್,ಜ.19 (DaijiworldNews/HR): ಕೊರೊನಾ ಸೋಂಕು ಹರಡುತ್ತದೆ ಎಂಬ ಭಯದಿಂದ ಸುಮಾರು ಮೂರು ತಿಂಗಳ ಕಾಲ ಯಾರಿಗೂ ಗೊತ್ತಿಲ್ಲದಂತೆ ಶಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಡಗಿ ಕುಳಿತಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಅಮೇರಿಕಾದ ಅಧಿಕಾರಿಗಳು ತಿಳಿಸಿದ್ದಾರೆ.
ಆದಿತ್ಯ ಸಿಂಗ್(36) ಅಕ್ಟೋಬರ್ 19ರಿಂದ ಶಿಕಾಗೋದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುರಕ್ಷಿತ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದು, ಅವರನ್ನು ಜನವರಿ 16 ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಆದಿತ್ಯ ಸಿಂಗ್ ವಿರುದ್ಧ ವಿಮಾನ ನಿಲ್ದಾಣದಲ್ಲಿನ ನಿರ್ಬಂಧಿತ ಪ್ರದೇಶದೊಳಕ್ಕೆ ಕಾನೂನು ಬಾಹಿರವಾಗಿ ಪ್ರವೇಶಿಸಿದ್ದ ಮತ್ತು ಅಸಭ್ಯತೆ, ಕಳ್ಳತನ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಕೊರೊನಾ ಸೋಂಕಿನ ಭಯದಿಂದಾಗಿ ಮನೆಗೆ ತೆರಳದೆ ಶಿಕಾಗೋ ವಿಮಾನ ನಿಲ್ದಾಣದ ಭದ್ರತಾ ವಲಯದಲ್ಲಿಯೇ ಆದಿತ್ಯ ಸಿಂಗ್ ವಾಸವಾಗಿರುವುದಾಗಿ ಅಸಿಸ್ಟೆಂಟ್ ಸ್ಟೇಟ್ ಅಟಾರ್ನಿ ಕಾಥ್ಲೀಲಿನ್ ಹಾಗೆರ್ಟೈ ಕೋರ್ಟ್ ಗೆ ತಿಳಿಸಿದ್ದರು.