ನ್ಯೂಯಾರ್ಕ್, ಜ.20 (DaijiworldNews/PY): ಭಯೋತ್ಪಾದನಾ ದಾಳಿಗೆ ಕುಮ್ಮಕ್ಕು ನೀಡುತ್ತಿರುವ ಆರೋಪದಡಿ ಅಮೇರಿಕಾದ ಸೈನಿಕ ಕೋಲ್ ಜೇಮ್ಸ್ ಬ್ರಿಡಸ್ ಅವರನ್ನು ಜಾರ್ಜಿಯಾದಲ್ಲಿ ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
"ಬಂಧಿತ ಕೋಲ್ ಜೇಮ್ಸ್ ಬ್ರಿಡ್ಜಸ್ ಓಹಿಯೋದ ನಿವಾಸಿಯಾಗಿದ್ದು, ಈತನನ್ನು ಇಸ್ಲಾಮಿಕ್ ಸ್ಟೇಟ್ಗೆ ಬೆಂಬಲ ಹಾಗೂ ಮಿಲಿಟರಿ ಸಿಬ್ಬಂದಿಯ ಹತ್ಯೆ ಯತ್ನ ಆರೋಪದಡಿ ಬಂಧಿಸಲಾಗಿದೆ" ಎಂದು ಮ್ಯಾನ್ಹ್ಯಾಟನ್ನ ಫೆಡರಲ್ ಪ್ರಾಸಿಕ್ಯೂಟರ್ನ ವಕ್ತಾರ ನಿಕೋಲಸ್ ಬಯಾಸ್ ಹೇಳಿದ್ದಾರೆ.
"ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಸದಸ್ಯರೆಂದು ತಪ್ಪಾಗಿ ತಿಳಿದುಕೊಂಡಿದ್ದು, ಜೇಮ್ಸ್ ಎಫ್ಬಿಐ ಅಧಿಕಾರಿಗಳೊಂದಿಗೆ ಆನ್ಲೈನ್ ಚಾಟ್ ಮಾಡಿದ್ದಾರೆ. ಜೇಮ್ಸ್ ಮಾಡಿದ ಚಾಟ್ನಲ್ಲಿ ಭಯೋತ್ಪಾದನಾ ದಾಳಿಯ ವಿಚಾರವಾಗಿ ಪ್ರಸ್ತಾಪಿಸಲಾಗಿದೆ. ಅಮೇರಿಕಾ ಸೇನೆಯ ಮೇಲೆ ದಾಳಿ ನಡೆಸಲು ಯೋಜಿಸಲಾಗಿದೆ ಎನ್ನುವ ವಿಚಾರ ನಮಗೆ ಮೊದಲೇ ಲಭ್ಯವಾಗಿದೆ" ಎಂದು ತಿಳಿಸಿದ್ದಾರೆ.
"9/11ರ ದಾಳಿಯ ನೆನಪಿನ ಸಲುವಾಗಿ ನ್ಯೂಯಾರ್ಕ್ ನಗರದಲ್ಲಿ ನಿರ್ಮಿಸಲಾಗಿರುವ ಸ್ಮಾರಕ ಸೇರಿ ಕೆಲವು ಮುಖ್ಯವಾದ ಸ್ಮಾರಕಗಳನ್ನು ನಿರ್ನಾಮ ಮಾಡಲು ಹಾಗೂ ಮಧ್ಯಪ್ರಾಚ್ಯದಲ್ಲಿರುವ ಅಮೇರಿಕಾದ ಸೇನಾಪಡೆಯ ಮೇಲೆ ದಾಳಿ ನಡೆಸುವ ವಿಚಾರದ ಬಗ್ಗೆ ಚರ್ಚಿಸಿದ್ದಾರೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಅಮೇರಿಕಾದ ಸೈನಿಕ ಕೋಲ್ ಜೇಮ್ಸ್ ಬ್ರಿಡಸ್ ಅಮೇರಿಕಾಕ್ಕೆ ದ್ರೋಹವೆಸಗಿದ್ದಾರೆ. ಇವರು ಮಧ್ಯಪ್ರಾಚ್ಯದಲ್ಲಿರುವ ಅಮೇರಿಕಾದ ಸೇನಾಪಡೆಯ ಮೇಲೆ ದಾಳಿ ನಡೆಸುವ ಸಲುವಾಗಿ ಐಎಸ್ಐಎಸ್ಗೆ ಸಹಾಯ ಮಾಡಿದ್ದಾರೆ" ಎಂದು ನ್ಯೂಯಾರ್ಕ್ ನಗರದ ಎಫ್ಬಿಐ ಕಚೇರಿಯ ಮುಖ್ಯಸ್ಥ ವಿಲಿಯಂ ಎಫ್. ಸ್ವೀನಿ ಜೂನಿಯರ್ ತಿಳಿಸಿದ್ದಾರೆ.
ಕೋಲ್ ಜೇಮ್ಸ್ ಬ್ರಿಡ್ಜಸ್, 2019 ಸೆಪ್ಟೆಂಬರ್ ತಿಂಗಳಲ್ಲಿ ಅಮೇರಿಕಾದದ ಸೇನೆಗೆ ಸೇರ್ಪಡೆಗೊಂಡಿದ್ದರು.