ಬೀಜಿಂಗ್, ಜ.20 (DaijiworldNews/MB) : ಅಕ್ಟೋಬರ್ನಿಂದ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದ ಅಲಿಬಾಬಾ ಗ್ರೂಪ್ ಸ್ಥಾಪಕ ಜಾಕ್ ಮಾ ಅವರ ಬಗ್ಗೆ ಊಹಾಪೋಹಗಳು ಹರಡುತ್ತಿರುವ ನಡುವೆಯೇ, ಜಾಕ್ ಮಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಅಕ್ಟೋಬರ್ನಲ್ಲಿ ಶಾಂಘೈನಲ್ಲಿ ವೇದಿಕೆಯೊಂದರಲ್ಲಿ ಮಾತನಾಡಿದ್ದ ಜಾಕ್ ಮಾ ಆಡಳಿತ ಪಕ್ಷದ ನಿಯಂತ್ರಕ ದೋಷದ ಬಗ್ಗೆ ಮಾತನಾಡಿದ್ದರು. ಬಳಿಕ ಅವರು ಯಾವುದೇ ಸಾರ್ವಜನಿಕ ಸಭೆಯಲ್ಲಿ ಹಾಜರಾಗಿಲ್ಲ.
ಬುಧವಾರ ಆನ್ಲೈನ್ ಸಮ್ಮೇಳನವೊಂದರಲ್ಲಿ ಜಾಕ್ ಮಾ 100 ಗ್ರಾಮೀಣ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ತಿಂಗಳುಗಳ ಬಳಿಕ ಅವರು ಆನ್ಲೈನ್ ಮೂಲಕ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯ ಬ್ಲಾಗ್ನಲ್ಲಿ ಮೊದಲು ವರದಿಯಾಗಿತ್ತು. ಈ ವಿಚಾರದ ಬಗ್ಗೆ ಅರಿವಿರುವ ಜನರು ಅದನ್ನು ದೃಢಪಡಿಸಿದ್ದಾರೆ.
ಜಾಕ್ ಮಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಕಾರಣದಿಂದಾಗಿ ಬೀಜಿಂಗ್ ಆನ್ಲೈನ್ ಫೈನಾನ್ಸ್ ಆಂಟ್ ಗ್ರೂಪ್ ಕಂಪೆನಿ ಹಾಗೂ ಅಲಿ ಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಭವಿಷ್ಯದ ಬಗ್ಗೆ ಹರಡಿದ ವದಂತಿಗೆ ತೆರೆ ಎಳೆದಂತಾಗಿದೆ.