ವಾಷಿಂಗ್ಟನ್, ಜ.21 (DaijiworldNews/MB) : ಅಮೇರಿಕಾದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ 78 ವರ್ಷದ ಜೋ ಬಿಡೆನ್ ಮತ್ತು ಉಪಾಧ್ಯಕ್ಷೆಯಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ದಾಂದಲೆ ನಡೆಸುವ ಭೀತಿಯ ಹಿನ್ನೆಲೆ ಭಾರೀ ಭದ್ರತೆಯೊಂದಿಗೆ ಸಂಸತ್ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಸೇನೆಯ (ನ್ಯಾಷನಲ್ ಗಾರ್ಡ್ಸ್) 25 ಸಾವಿರಕ್ಕೂ ಅಧಿಕ ಯೋಧರು ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿದ್ದರು. ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಪ್ರಮಾಣ ವಚನ ಬೋಧಿಸಿದರು.
ಬಳಿಕ ಮಾತನಾಡಿದ ಬಿಡೆನ್, ''ಇದು ಪ್ರಜಾಪ್ರಭುತ್ವದ ದಿನ. ಇದು ಅಭ್ಯರ್ಥಿಯ ಗೆಲುವಲ್ಲ, ಬದಲಾಗಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ದೊರೆತ ಜಯ'' ಎಂದು ಹೇಳಿದರು.
ಹಾಗೆಯೇ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಕಮಲಾ ಹ್ಯಾರಿಸ್ ಅವರು, ''ಸೇವೆಗೆ ಸಿದ್ದ'' ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಅಮೇರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜೋ ಬಿಡೆನ್ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ.