ವಾಷಿಂಗ್ಟನ್, ಜ.22 (DaijiworldNews/PY): "ಅಮೇರಿಕಾದ ನೂತನ ಆಡಳಿತವು ತನ್ನ ಕಾರ್ಯವನ್ನು ಪ್ರಾರಂಭಿಸಿದೆ" ಎಂದು ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದರು.
ಜೋ ಬಿಡೆನ್ ಅವರು ಅಮೇರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ 12ಕ್ಕೂ ಅಧಿಕ ಪ್ರಮುಖ ಕಾರ್ಯಾದೇಶಗಳಿಗೆ ಬಿಡೆನ್ ಹಸ್ತಾಕ್ಷರ ಹಾಕಿದ್ದು, ಚುನಾವಣಾ ಪ್ರಚಾರದ ಸಂದರ್ಭ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ.
ಬುಧವಾರ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅಮೇರಿಕಾದ 46ನೇ ಅಧ್ಯಕ್ಷ ಜೊ ಬಿಡೆನ್ ಅವರು ಡೊನಾಲ್ಡ್ ಟ್ರಂಪ್ ಸರ್ಕಾರದ ಮುಸ್ಲೀಮರ ಪ್ರಯಾಣ ನಿಷೇಧ ನೀತಿಯ ತೆರವು ಸೇರಿದಂತೆ 17 ಪ್ರಮುಖ ಆದೇಶಗಳಿಗೆ ಬಿಡೆನ್ ಹಸ್ತಾಕ್ಷರ ಹಾಕಿದ್ದರು.
"ವಿದೇಶಾಂಗ ನೀತಿಗಳು ಸೇರಿದಂತೆ ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟಂತೆ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಂಡಿದ್ದ ಹಲವಾರ ತೀರ್ಮಾನಗಳನ್ನು ನೂತನ ಅಧ್ಯಕ್ಷ ಜೋ ಬಿಡೆನ್ ಅವರು ರದ್ದುಪಡಿಸಿದ್ದಾರೆ" ಎಂದು ಶ್ವೇತಭವನ ತಿಳಿಸಿದೆ.
ಇನ್ನು ಅಕ್ರಮ ವಲಸಿಗರ ತಡೆಗಾಗಿ ಮೆಕ್ಸಿಕೊ ಗಡಿಯುದ್ದಕ್ಕೂ ನಿರ್ಮಿಸಲು ಯೋಜಿಸಿದ್ದ ಗೋಡೆ ಕಾಮಗಾರಿಗೆ ಬಿಡೆನ್ ತಕ್ಷಣದ ಮುಕ್ತಾಯ ಘೋಷಣೆ ಮಾಡಿದ್ದು, ಪ್ಯಾರಿಸ್ ಒಪ್ಪಂದಕ್ಕೆ ಮರುಸೇರ್ಪಡೆ ಹಾಗೂ ವಲಸಿಗ ನಿರಾಶ್ರಿತರ ರಕ್ಷಣೆಗೂ ಕ್ರಮ ಕೈಗೊಂಡಿದ್ದಾರೆ.