ವಾಷಿಂಗ್ಟನ್, ಜ.22 (DaijiworldNews/PY): "ಪ್ರಯಾಣಿಕರು ಮೊದಲು ಅಮೇರಿಕಾಕ್ಕೆ ಪ್ರಯಾಣಿಸುವ ಮುನ್ನ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿದೇಶದಿಂದ ಬಂದವರಿಗೆ ಕ್ಯಾರಂಟೈನ್ ಕಡ್ಡಾಯವಾಗಿದ್ದು, ಮಾಸ್ಕ್ ಧರಿಸಬೇಕು" ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಕಾರ್ಯಾದೇಶಗಳಿಗೆ ಸಹಿ ಹಾಕಿದ ನಂತರ ಮಾತನಾಡಿದ ಅವರು, "ವಿಜ್ಞಾನ ಹಾಗೂ ಸತ್ಯಗಳ ಆಧಾರದ ಮೇಲೆ ಸಮಗ್ರ ಹಾಗೂ ವಿಸ್ತೃತ ರೂಪವನ್ನು ರಚನೆ ಮಾಡಲಾಗಿದೆ. ಬದಲಾಗಿ ರಾಜಕೀಯ ಮೂಲಕ ಇದನ್ನು ರಚಿಸಿಲ್ಲ. ಈ ಹಿನ್ನೆಲೆ ಪರಿಣಾಮಕಾರಿಯಾದ ಕೊರೊನಾ ಲಸಿಕಾ ಅಭಿಯಾನವನ್ನು ಪ್ರಾರಂಭ ಮಾಡೋಣ. ಇದರೊಂದಿಗೆ 100 ದಿನಗಳಲ್ಲಿ 10 ಕೋಟಿ ಡೋಸ್ಗಳನ್ನು ನೀಡುವ ಗುರಿಯನ್ನು ಹೊಂದಿದೆ" ಎಂದು ತಿಳಿಸಿದ್ದಾರೆ.
"ದೇಶದಲ್ಲಿ ಉಂಟಾಗಿರುವ ಯುದ್ಧದ ರೀತಿಯ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟನಲ್ಲಿ ಹೆಚ್ಚಿನ ಸುರಕ್ಷತಾ ಸಿದ್ದತೆಗಳನ್ನು ಸಿದ್ದಪಡಿಸಲಾಗುತ್ತಿದೆ. ಕೊರೊನಾ ಸೋಂಕಿನಿಂದ ಈಗಾಗಲೇ ನಾಲ್ಕು ಲಕ್ಷ ಅಮೇರಿಕನ್ನರು ಸಾವನ್ನಪ್ಪಿದ್ದಾರೆ. ಎರಡನೇ ವಿಶ್ವ ಯುದ್ದದ ಸಂದರ್ಭ ಇಷ್ಟು ಪ್ರಮಾಣದಲ್ಲಿ ಸಾವು ಸಂಭವಿಸಿರಲಿಲ್ಲ" ಎಂದಿದ್ದಾರೆ.
"ಇದೇ ರೀತಿಯಾದ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಕೂಡಾ ಮುಂದುವರೆದಲ್ಲಿ ಸಾವಿನ ಸಂಖ್ಯೆ ಮತ್ತಷ್ಟೂ ಹೆಚ್ಚಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸೋಂಕು ನಿಯಂತ್ರಣಕ್ಕೆ ಕಠಿಣವಾದ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟ. ಏನೇ ಆದರೂ, ನಾವು ಈ ಪಿಡುಗನ್ನು ಸೋಲಿಸುತ್ತೇವೆ. ಈ ನಿಟ್ಟಿನಲ್ಲಿ ನಾವು ಎಲ್ಲಾ ರೀತಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.