ವಾಷಿಂಗ್ಟನ್,ಜ.23 (DaijiworldNews/HR): ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ವಾಗ್ದಾಂಡನೆ ಪ್ರಕ್ರಿಯೆಯನ್ನು ಫೆಬ್ರುವರಿ 8ರಿಂದ ಸೆನೆಟ್ ಆರಂಭಿಸಲಿದೆ ಎಂದು ತಿಳಿದು ಬಂದಿದೆ.
100 ಸದಸ್ಯರನ್ನು ಒಳಗೊಂಡಿರುವ ಸೆನೆಟ್ನಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದ 50 ಸದಸ್ಯರಿದ್ದು, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೇ ಸೆನೆಟ್ ಚೇರಮನ್ ಆಗಿದ್ದಾರೆ.
ಇನ್ನು ಈ ಕುರಿತು ವಿವರಣೆ ನೀಡಿರುವ ಸೆನೆಟ್ ನಾಯಕ ಚುಕ್ ಶುಮರ್, "ಸೋಮವಾರ ವಾಗ್ದಾಂಡನೆ ಕುರಿತು ಪ್ರಕ್ರಿಯೆ ಆರಂಭಿಸುವಂತೆ ಸದನದ ನಾಯಕರು ಕೋರಲಿದ್ದು, ನಂತರ ಈ ಹಿಂದೆ ವಿಚಾರಣೆಗಳು ನಡೆದಂತೆ ಕಾನೂನುಬದ್ಧ ವಾದಮಂಡಿಸಲು ಸಿದ್ಧತೆಗಳನ್ನು ಕೈಗೊಳ್ಳಲು ಕಾಲಾವಕಾಶ ದೊರೆಯಲಿದೆ. ಫೆಬ್ರುವರಿ 8ರವರೆಗೆ ಇತರ ವಿಷಯಗಳ ಬಗ್ಗೆಯೂ ಕಲಾಪ ನಡೆಯಲಿವೆ" ಎಂದು ತಿಳಿಸಿದ್ದಾರೆ.
ಸೆನೆಟ್ನಲ್ಲಿಯೂ ವಾಗ್ದಂಡನೆಗೆ ಜಯ ಸಿಕ್ಕರೆ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಡೊನಾಲ್ಡ್ ಟ್ರಂಪ್ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.