ವಾಷಿಂಗ್ಟನ್, ಜ.24 (DaijiworldNews/MB) : ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಮೆಕ್ಸಿಕೊ ಅಧ್ಯಕ್ಷರ ಜೊತೆಗೆ ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಅವರು ದೂರವಾಣಿಯಲ್ಲಿ ದೇಶಗಳ ನಡುವಿನ ಬಾಂಧವ್ಯದ ಬಗ್ಗೆ ಚರ್ಚೆ ನಡೆಸಿದರು ಎಂದು ವರದಿಯಾಗಿದೆ.
ಜಿ–7 ಶೃಂಗಸಭೆಯನ್ನು ಈ ಬಾರಿ ಬ್ರಿಟನ್ ಹಾಗೂ ಜಾಗತಿಕ ತಾಪಮಾನ ಬದಲಾವಣೆ (ಸಿಒಪಿ 26) ಕುರಿತು ಸಮ್ಮೇಳನವನ್ನು ಅಮೇರಿಕಾವು ಆಯೋಜನೆ ಮಾಡಲಿದ್ದು ಈ ಸಲುವಾಗಿ ಉಭಯ ರಾಷ್ಟ್ರಗಳು ಜೊತೆಯಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ತಾಪಮಾನ ಬದಲಾವಣೆ, ಕೊರೊನಾ ಮೊದಲಾದವುಗಳ ಕುರಿತು ಚರ್ಚೆ ನಡೆಸಲಾಗಿದೆ. ಹಾಗೆಯೇ ವೇಳೆ ಚೀನಾ, ಇರಾನ್, ರಷ್ಯಾ ಜೊತೆಗೆ ಹಂಚಿಕೊಳ್ಳಬಹುದಾದ ವಿದೇಶ ನೀತಿ ಆದ್ಯತೆಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
ಬಿಡೆನ್ ಅವರು ಮೆಕ್ಸಿಕನ್ ಅಧ್ಯಕ್ಷ ಆ್ಯಂಡ್ರೆಸ್ ಮ್ಯಾನ್ಯುಯೆಲ್ ಲೋಪೆಜ್ ಒಬ್ರೆಡರ್ ಅವರ ಜೊತೆಗೂ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ಸಂದರ್ಭ ದ್ವಿಪಕ್ಷೀಯ ಸಹಕಾರ, ಪ್ರಾದೇಶಿಕ ವಲಸೆ, ಕೊರೊನಾ ಸಮಸ್ಯೆ, ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯದ ಬಗ್ಗೆ ಚರ್ಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.