ಇಸ್ಲಾಮಾಬಾದ್, ಜ.24 (DaijiworldNews/MB) : ಅತ್ಯಾಧುನಿಕವಾದ 5ಜಿ ಇಂಟರ್ನೆಟ್ ನೆಟ್ವರ್ಕ್ ಅನ್ನು ಪಾಕಿಸ್ತಾನವು 2022–23ರಲ್ಲಿ ಪರಿಚಯಿಸಲು ಯೋಜನೆ ರೂಪಿಸಿರುವುದಾಗಿ ವರದಿಯಾಗಿದೆ. ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರವು ತನ್ನ ವಾರ್ಷಿಕ ವರದಿಯಲ್ಲಿ ಈ ಪ್ರಸ್ತಾಪ ಮಾಡಿದೆ ಎಂದು ವರದಿ ತಿಳಿಸಿದೆ.
ಈ 5ಜಿ ಇಂಟರ್ನೆಟ್ ನೆಟ್ವರ್ಕ್ ಡೌನ್ಲೋಡ್ ವೇಗವನ್ನು 10 ಪಟ್ಟು ಅಧಿಕಗೊಳಿಸಲಿದ್ದು, ಆರ್ಥಿಕ ಚಟುವಟಿಕೆ ವಿಸ್ತರಣೆಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ 5ಜಿ ತಂತ್ರಜ್ಞಾನ ಪರಿಚಯಿಸಲು ಪಾಕಿಸ್ತಾನ ಸಮಗ್ರ ಯೋಜನೆ ಅಭಿವೃದ್ಧಿಪಡಿಸುತ್ತಿದೆ ಎಂದು ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರವು ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ.
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಡಿಜಿಟಲ್ ಆರ್ಥಿಕತೆ ವಿಸ್ತರಿಸಿದೆ. ಡಿಜಿಟಲ್ ಆರ್ಥಿಕತೆಯನ್ನು ಇನ್ನಷ್ಟು ಅಧಿಕಗೊಳಿಸಲು ಈ 5ಜಿ ತಂತ್ರಜ್ಞಾನದ ಮೂಲಕ ಸಾಧ್ಯವಾಗಲಿದೆ ಎಂದು ವರದಿಯಾಗಿದೆ.