ವಾಷಿಂಗ್ಟನ್, ಜ.26 (DaijiworldNews/PY): ರೂಪಾಂತರಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಬ್ರೆಜಿಲ್ ಹಾಗೂ ಯುರೋಪ್ ಮೇಲೆ ಪುನಃ ನಿರ್ಬಂಧ ವಿಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಅಲ್ಲಿನ ಪ್ರಯಾಣಿಕರಿಗೂ ಕೂಡಾ ನಿರ್ಬಂಧ ವಿಧಿಸಲಾಗಿದೆ" ಎಂದು ಶ್ವೇತಭವನ ಹೇಳಿದೆ.
"ಕೊರೊನಾ ಹಾಗೂ ವೈದ್ಯಕೀಯ ತಂಡದ ಸಲಹೆಯ ಆಧಾರದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದ್ದು, ಐರ್ಲೆಂಡ್, ಬ್ರಿಟನ್, ಯುರೋಪ್ನ ಷೆಂಗೆನ್ ಪ್ರದೇಶ ಹಾಗೂ ಬ್ರೆಜಿಲ್ ಮೇಲಿನ ಪ್ರಯಾಣದ ಮೇಲೆ ನಿರ್ಬಂಧ ಹೇರಲು ಮುಂದುವರೆಸಲಾಗಿದೆ" ಎಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ.
"ರೂಪಾಂತರಿ ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಅಂತರಾಷ್ಟ್ರೀಯ ಪ್ರಯಾಣದ ಮೇಲಿನ ನಿರ್ಬಂಧವನ್ನು ಹಿಂಪಡೆಯುವುದು ಸೂಕ್ತವಲ್ಲ. ಈ ನಿಟ್ಟಿನಲ್ಲಿ ಪ್ರಯಾಣದ ಮೇಲೆ ಮತ್ತೆ ನಿರ್ಬಂಧ ವಿಧಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಜ.26ರಂದು ಅಮೇರಿಕಾಕ್ಕೆ ಆಗಮಿಸುವ ಮೊದಲು ಅಂತರಾಷ್ಟ್ರೀಯ ಪ್ರಯಾಣಿಕರು ನಿಲ್ದಾಣದಲ್ಲಿ ಕಡ್ಡಾಯವಾಗಿ ಕೊರೊನಾ ಪರೀಕ್ಷೆಯ ನೆಗೆಟಿವ್ ಪ್ರಮಾಣಪತ್ರವನ್ನು ನೀಡಬೇಕು" ಎಂದಿದ್ದಾರೆ.