ವಾಷಿಂಗ್ಟನ್, ಜ.27 (DaijiworldNews/PY): ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.
ಲಸಿಕೆ ಪಡೆದ ಬಳಿಕ ಮಾತನಾಡಿದ ಅವರು, "ನಿಮ್ಮ ಸರದಿ ಬಂದ ಸಂದರ್ಭ ಪ್ರತಿಯೋರ್ವರೂ ಕೂಡಾ ಕೊರೊನಾ ಲಸಿಕೆ ಪಡೆಯಬೇಕು. ಇದು ಜೀವ ರಕ್ಷಿಸಲಿದೆ" ಎಂದಿದ್ದಾರೆ.
ಕಮಲಾ ಹ್ಯಾರಿಸ್ ಅವರು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ನಲ್ಲಿ ಕೊರೊನಾ ಲಸಿಕೆ ಪಡೆದರು. ಕಳೆದ ಡಿಸೆಂಬರ್ 29ರಂದು ಕಮಲಾ ಹ್ಯಾರಿಸ್ ಅವರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರು.
ಡಿಸೆಂಬರ್ ತಿಂಗಳಿನಲ್ಲಿ ಅಮೇರಿಕಾದಲ್ಲಿ ಫೈಜರ್ ಹಾಗೂ ಮಾಡರ್ನಾಗಳೆಂಬ ಎರಡು ಕೊರೊನಾ ಲಸಿಕೆಗಳ ತರ್ತು ಬಳಖೆಗೆ ಅನುಮೋದನೆ ನೀಡಲಾಗಿದ್ದು, ಕಳೆದ ಒಂದು ವಾರದಿಂದ ದಿನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ.
ಅಮೇರಿಕಾ ಅಧ್ಯಕ್ಷರಾಗಿ ಅಧಿಕಾರಕ್ಕೇರಿದ ಮೊದಲ ದಿನದಂದೇ 100 ದಿನಗಳಲ್ಲಿ 10 ಕೋಟಿ ಮಂದಿಗೆ ಲಸಿಕೆ ನೀಡುವ ಉದ್ದೇಶ ಹೊಂದಿದ್ದೇವೆ ಎಂದು ನೂತನ ಅಧ್ಯಕ್ಷ ಜೋ ಬಿಡೆನ್ ಅವರು ಘೋಷಣೆ ಮಾಡಿದ್ದರು.
ಈ ನಡುವೆ ಬೇಸಿಗೆಯಲ್ಲಿ 30 ಕೋಟಿ ಮಂದಿಗೆ ಕೊರೊನಾ ಲಸಿಕೆ ನೀಡುವ ನಿಟ್ಟಿನಲ್ಲಿ 60 ಕೋಟಿ ಡೋಸ್ಗಳ ಗುರಿ ತಲುಪಲು 20 ಕೋಟಿ ಕೊರೊನಾ ಲಸಿಕೆ ಡೋಸ್ಗಳನ್ನು ಖರೀದಿಸಲು ಅಮೇರಿಕಾ ತೀರ್ಮಾನ ಮಾಡಿದೆ.