ವಾಷಿಂಗ್ಟನ್, ಜ.28 (DaijiworldNews/PY): "ಫೇಸ್ಬುಕ್ನಲ್ಲಿ ರಾಜಕೀಯ ಪಕ್ಷಗಳಿಗೆ ಸಂಬಂಧಪಟ್ಟ ಗ್ರೂಪ್ಗಳನ್ನು ಶಿಫಾರಸು ಮಾಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ" ಎಂದು ಸಾಮಾಜಿಕ ಮಾಧ್ಯಮ ಸಂಸ್ಥೆ ಫೇಸ್ಬುಕ್ನ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರ್ಬರ್ಗ್ ತಿಳಿಸಿದ್ದಾರೆ.
ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೂ ಮೊದಲು ಫೇಸ್ಬುಕ್ ಬಳಕೆದಾರರಿಗೆ ರಾಜಕೀಯ ಪಕ್ಷಗಳಿಗೆ ಸಂಬಂಧಪಟ್ಟ ಗ್ರೂಪ್ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ ಎಂದು ಕಂಪೆನಿ ತಿಳಿಸಿದ್ದು, ಆ ನಿಯಮಗಳನ್ನು ಈಗ ಜಾಗತಿಕವಾಗಿ ಅನುಷ್ಠಾನಗೊಳಿಸಲಾಗಿದೆ ಎಂದಿದೆ.
ಫೇಸ್ಬುಕ್ನ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರ್ಬರ್ಗ್ ಅವರಿಗೆ ಪತ್ರ ಬರೆದಿದ್ದ ಅಮೇರಿಕಾದ ಸೆನಟರ್ ಎಡ್ವರ್ಡ್ ಮಾರ್ಕಿನ್ ಅವರು, "ದ್ವೇಷ ಹಾಗೂ ತಾರತಮ್ಯದ ವಿಷಯಗಳನ್ನು ಪ್ರಸಾರ ಮಾಡುವವರು ವಿರುದ್ದ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು"ಎಂದಿದ್ದರು.
ಫೇಸ್ಬುಕ್ನ ಗಳಿಕೆಯ ವಿಚಾರವಾಗಿ ವಿಶ್ಲೇಷಕರ ಜೊತೆ ಸಂವಾದ ನಡೆಸಿ ಜುಕರ್ಬರ್ಗ್, "ಫೇಸ್ಬುಕ್ ಕಂಪೆನಿಯು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇದರೊಂದಿಗೆ ರಾಜಕೀಯ ವಿಚಾರದ ಬಗೆಗಿನ ಚರ್ಚೆಗಳನ್ನು ಕಡಿಮೆ ಮಾಡುವ ವಿಷಯದ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.