ವಾಷಿಂಗ್ಟನ್, ಜ.29 (DaijiworldNews/HR): ಭಾರತೀಯ ಮೂಲದ ಸೋಹಿನಿ ಚಟರ್ಜಿ ಮತ್ತು ಅದಿತಿ ಗೊರೂರ್ ಅವರನ್ನು ವಿಶ್ವಸಂಸ್ಥೆಯ ಅಮೇರಿಕಾ ರಾಯಭಾರ ಕಚೇರಿಯಲ್ಲಿ ಎರಡು ರಾಜತಾಂತ್ರಿಕ ಸ್ಥಾನಗಳಿಗೆ ಅಧ್ಯಕ್ಷ ಜೋ ಬಿಡೆನ್ ಆಡಳಿತ ನೇಮಿಸಿದೆ.
ಸೋಹಿನಿ ಅವರು ಅಮೇರಿಕಾದ ರಾಯಭಾರಿಗೆ ಹಿರಿಯ ನೀತಿ ಸಲಹೆಗಾರರಾಗಿ ಹಾಗೂ ಗೊರೂರ್ ಅವರು ರಾಯಭಾರ ಕಚೇರಿಯ ನೀತಿ ಸಲಹೆಗಾರರಾಗಿ ಕಾರ್ಯನಿರ್ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಇನ್ನು ಜಾಗತಿಕ ಅಭಿವೃದ್ಧಿ, ಸಂಘರ್ಷ ಮತ್ತು ಸಮೂಹ ದೌರ್ಜನ್ಯ ವಿಷಯಗಳಲ್ಲಿ ಪರಿಣತರಾಗಿರುವ ಸೋಹಿನಿ ಅವರು ಕೊಲಂಬಿಯ ಯುನಿವರ್ಸಿಟಿ ಸ್ಕೂಲ್ ಆಫ್ ಇಂಟರ್ನ್ಯಾಷನಲ್ನಲ್ಲಿ ಬೋಧಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಅವರು ಅಮೆರಿಕದ ಅಂತರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ ನೀತಿ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದ್ದರು.
ಅದಿತಿ ಗೊರೂರ್ ಅವರು ಅಮೇರಿಕಾದ ಶಾಂತಿ ಪ್ರಕ್ರಿಯೆ ವಿಷಯದಲ್ಲಿ ಪರಿಣತರಾಗಿದ್ದು, ಇತ್ತೀಚಿನವರೆಗೆ ಸ್ಟಿಮ್ಸನ್ ಸೆಂಟರ್ನಲ್ಲಿ ನಾಗರಿಕರ ರಕ್ಷಣೆ ಮತ್ತು ಸಂಘರ್ಷ ಕಾರ್ಯಕ್ರಮದ ನಿರ್ದೇಶಕಿಯಾಗಿದ್ದರು.