ವಾಷಿಂಗ್ಟನ್, ಜ.30 (DaijiworldNews/PY): ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಯನ್ನು ಇತ್ತೀಚೆಗೆ ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಈ ಬಗ್ಗೆ ಭಾರತೀಯ ಮೂಲದ ಅಮೇರಿಕನ್ನರು ವಿರೋಧ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಉತ್ತರ ಕ್ಯಾಲಿಫೋರ್ನಿಯಾದಲ್ಲಿನ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್ನಲ್ಲಿರುವ 6 ಅಡಿ ಎತ್ತರದ, 294 ಕೆ.ಜಿ ತೂಕದ ಗಾಂಧಿ ಪ್ರತಿಮೆಯನ್ನು ಧ್ವಂಸ ಮಾಡಲಾಗಿದ್ದು, ಪ್ರತಿಮೆಯ ಪಾದ ಹಾಗೂ ಮುಖದ ಭಾಗಕ್ಕೆ ಹಾನಿ ಮಾಡಲಾಗಿದೆ" ಎಂದು ಸ್ಥಳೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಡೇವಿಸ್ ನಗರ ಸ್ಥಳೀಯ ಆಡಳಿತದ ಸದಸ್ಯ ಲೂಕಸ್ ಫ್ರೀರಿಚ್ಸ್, "ಹಾನಿಯುಂಟಾದ ಗಾಂಧಿ ಪ್ರತಿಮೆಯನ್ನು ಅಲ್ಲಿಂದ ತೆಗೆಯಲಾಗಿದೆ ಹಾಗೂ ಪ್ರತಿಮೆಯನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ" ಎಂದಿದ್ದಾರೆ.
"ಗಾಂಧಿ ಪ್ರತಿಮೆಯ ಡೇವಿಸ್ ನಗರದ ಸಂಸ್ಕೃತಿಯ ಒಂದು ಭಾಗವಾಗಿದೆ. ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಕೈಗೊಂಡಿದ್ದೇವೆ" ಎಂದು ಡೇವಿಸ್ ಪೊಲೀಸ್ ಇಲಾಖೆಯ ಉಪ ಮುಖ್ಯಸ್ಥ ಪೌಲ್ ಡೊರೊಶಾವ್ ತಿಳಿಸಿದ್ದಾರೆ.
"ಜ.27ರಂದು ಧ್ವಂಸವಾಗಿದ್ದ ಗಾಂಧಿ ಪ್ರತಿಮೆಯು ಪತ್ತೆಯಾಗಿದ್ದು, ಈ ವಿಚಾರದ ಬಗ್ಗೆ ಪಾರ್ಕ್ನ ಸಿಬ್ಬಂದಿ ಮಾಹಿತಿ ನೀಡಿದ್ದರು" ಎಂದು ಪೊಲೀಸರು ಹೇಳಿದ್ದಾರೆ.