ವಾಷಿಂಗ್ಟನ್, ಜ.31 (DaijiworldNews/PY): ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಗ್ದಂಡನೆ ನಿರ್ಣಯಕ್ಕೆ ಸಂಬಂಧಪಟ್ಟಂತೆ ಟ್ರಂಪ್ ಅವರ ಪರ ವಕೀಲರ ತಂಡದಿಂದ ಇಬ್ಬರು ವಕೀಲರು ಹೊರನಡೆದಿದ್ದಾರೆ.
ಸೌತ್ ಕ್ಯಾರೋಲಿನಾ ಮೂಲದ ಬುಚ್ ಬೋವರ್ಸ್ ಹಾಗೂ ದೇಬೋರಾ ಬಾರ್ಬಿಯರ್ ಅವರು ಟ್ರಂಪ್ ಪರ ತಂಡದಿಂದ ಹೊರನಡೆದ ವಕೀಲರಾಗಿದ್ದಾರೆ.
ಫೆ.8ರಂದು ಡೊನಾಲ್ಡ್ ಟ್ರಂಪ್ ಅವರ ವಿರುದ್ದ ವಾಗ್ದಂಡನೆ ನಿರ್ಣಯಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಪ್ರಾರಂಭವಾಗಲಿದೆ. ಈ ಹಿನ್ನೆಲೆ ಟ್ರಂಪ್ ಅವರು ತಮ್ಮ ಪರ ವಾದ ಮಂಡನೆಗೆ ವಕೀಲರ ನೂತನ ತಂಡವನ್ನು ರಚಿಸಬೇಕಾಗಿದೆ ಎನ್ನಲಾಗುತ್ತಿದೆ.
ಜ.6ರಂದು ಅಮೇರಿಕಾ ಕ್ಯಾಪಿಟಲ್ಗೆ (ಸಂಸತ್) ನುಗ್ಗಿ ಟ್ರಂಪ್ ಬೆಂಬಲಿಗರು ದಾಂಧಲೆ ನಡೆಸಿ ಹಿಂಸಾಚಾರಕ್ಕೆ ಕಾರಣರಾಗಿದ್ದರು. ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದರು. ಈ ಹಿಂಸಾಚಾರ ನಡೆಯಲು ಟ್ರಂಪ್ ಅವರ ಪ್ರಚೋದನೆಯೇ ಕಾರಣ ಎನ್ನುವ ಆರೋಪದ ಹಿನ್ನೆಲೆ ಟ್ರಂಪ್ ಅವರ ವಿರುದ್ದ ವಾಗ್ದಂಡನೆ ನಿರ್ಣಯ ಕೈಗೊಳ್ಳಲಾಗಿದೆ.