ವಾಷಿಂಗ್ಟನ್, ಫೆ.02 (DaijiworldNews/PY): "ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಮಾತನಾಡಿ ಹೆಚ್ಚು ಸಮಯ ವ್ಯಯ ಮಾಡುವುದಿಲ್ಲ" ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಎರಡು ಬಾರಿ ವಾಗ್ದಂಡನೆಗೆ ಗುರಿಯಾಗಿದ್ದ ಏಕೈಕ ಅಮೇರಿಕಾದ ಅಧ್ಯಕ್ಷ ಎನ್ನುವ ಹಣೆಪಟ್ಟಿ ಹೊತ್ತ ಬಳಿಕವೂ ಟ್ರಂಪ್ ಅವರು ಸುದ್ದಿಯಲ್ಲಿದ್ದಾರೆ. ಅವರ ಬಗ್ಗೆ ಮಾತನಾಡಿ ಹೆಚ್ಚು ಸಮಯ ವ್ಯಯ ಮಾಡುವುದಿಲ್ಲ" ಎಂದಿದ್ದಾರೆ.
"ಈ ವಿಚಾರವನ್ನು ನಂಬಲು ಸ್ವಲ್ಪ ಕಷ್ಟವಾಗಬಹುದು. ಆದರೆ, ನಾವು ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಯೋಚನೆ ಹಾಗೂ ಮಾತನಾಡಿ ಸಮಯವನ್ನು ವ್ಯರ್ಥ ಮಾಡುವುದಿಲ್ಲ" ಎಂದು ತಿಳಿಸಿದ್ದಾರೆ.
ಟ್ರಂಪ್ ಅವರ ಅನುಪಸ್ಥಿತಿಯಲ್ಲಿ ನಿಮ್ಮ ಕೆಲಸಗಳನ್ನು ಸುಲಭಗೊಳಿಸಿವೆಯೋ?. ಮುಖ್ಯವಾಗಿ ಕೊರೊನಾ ಮಾತುಕತೆಯ ಸಂದರ್ಭಗಳಲ್ಲಿ ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜೆನ್ ಸಾಕಿ ಅವರು, "ರಿಪಬ್ಲಿಕನ್ ಸದಸ್ಯರಿಗೆ ಈ ಪ್ರಶ್ನೆ ಹೆಚ್ಚು ಸೂಕ್ತವಾಗಿದೆ. ಆದರೆ, ನಮಗೆ ಟ್ವಿಟ್ಟರ್ನಲ್ಲಿ ಟ್ರಂಪ್ ಅವರ ಅನುಪಸ್ಥಿತಿ ಬಾಧಿಸುತ್ತಿಲ್ಲ" ಎಂದಿದ್ದಾರೆ.
ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ವಿಚಾರದ ಬಗ್ಗೆ ತಪ್ಪು ಮಾಹಿತಿಗಳನ್ನು ಟ್ವೀಟ್ ಮಾಡುತ್ತಿದ್ದ ಕಾರಣ, ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಜಾಲತಾಣ ಖಾತೆಗಳಿಗೆ ನಿರ್ಬಂಧ ವಿಧಿಸಲಾಗಿದೆ.