ವಾಷಿಂಗ್ಟನ್, ಫೆ.03(DaijiworldNews/HR): ಕ್ಯಾಲಿಫೋರ್ನಿಯಾದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಹಾನಿಗೊಳಿಸಿರುವ ಪ್ರಕರಣವನ್ನು ಎಫ್ಬಿಐ ತನಿಖೆಗೆ ಹಸ್ತಾಂತರಿಸಬೇಕು ಎಂದು ಭಾರತೀಯ ಮೂಲದ ಅಮೇರಿಕನ್ ಸಂಸದರು ಒತ್ತಾಯಿಸಿದ್ದಾರೆ.
ಡೇವಿಸ್ನ ಸೆಂಟ್ರಲ್ ಪಾರ್ಕ್ನಲ್ಲಿದ್ದ ಮಹಾತ್ಮ ಗಾಂಧೀಜಿ ಅವರ ಕಂಚಿನ ಪ್ರತಿಮೆಗೆ ಹಾನಿ ಉಂಟು ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿರುವ ನಗರ ಪೊಲೀಸರು, ತನಿಖೆಯನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.
ಇನ್ನು ಸಂಸದ ರಾಜಾ ಕೃಷ್ಣಮೂರ್ತಿಯವರು ಈ ಕುರಿತು ಮಾತನಾಡಿ, "ನಾನು ಈ ದುರುದ್ದೇಶಪೂರಿತ ಕೃತ್ಯವನ್ನು ಖಂಡಿಸುತ್ತೇನೆ. ಭಾರತೀಯ ಅಮೇರಿಕನ್ನರನ್ನು ಬೆದರಿಸುವ ಉದ್ದೇಶದಿಂದ ಈ ಕೃತ್ಯವೆಸಗಲಾಗಿದ್ದು, ಈ ಪ್ರಕರಣವನ್ನು ಎಫ್ಬಿಐ ತನಿಖೆಗೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ.