ನವದೆಹಲಿ, ಫೆ.03 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿಯ ಹಲವು ಗಡಿಗಳಲ್ಲಿ ರೈತರು ಪ್ರತಿಭಟಿಸುತ್ತಿದ್ದು ಈ ಪ್ರತಿಭಟನೆಗೆ ಅಂತರ ರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರೈತರ ಪ್ರತಿಭಟನೆ ಕುರಿತಾದ ಒಂದು ಲೇಖನವನ್ನು ಉಲ್ಲೇಖ ಮಾಡಿ, ''ನಾವು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ?'' ಎಂದು ಪ್ರಶ್ನಿಸಿದ್ದಾರೆ. ರಿಹಾನ್ನಾರ ಈ ಟ್ವೀಟ್ಗೆ ಅಧಿಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ. ರಿಹಾನ್ನಾರ ಈ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ವಿವಿಧ ಗಡಿಗಳಲ್ಲಿ ಸುಮಾರು ಎರಡು ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದು ಎಲ್ಲವೂ ವಿಫಲವಾಗಿದೆ. ಗಣರಾಜ್ಯೋತ್ಸವದ ದಿನ ರೈತರು ನಡೆಸಿದ್ದ ಟ್ಯ್ರಾಕ್ಟರ್ ಪರೇಡ್ ವೇಳೆ ಹಿಂಸಾಚಾರ ನಡೆದಿದೆ. ಏತನ್ಮಧ್ಯೆ ಗಡಿಗಳಲ್ಲಿ ಮತ್ತಷ್ಟು ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿ ಪೊಲೀಸರು ದೆಹಲಿ–ಗಾಜಿಯಾಬಾದ್ ರಾಷ್ಟ್ರೀಯ ಹೆದ್ದಾರಿ–24 ಅನ್ನು ಮುಚ್ಚಿದ್ದಾರೆ.
ಈ ನಡುವೆ ರೈತರು ಪ್ರತಿಭಟಿಸುತ್ತಿರುವ ಸಮೀಪವಿರುವ ಪ್ರದೇಶಗಳಲ್ಲಿ ಇಂಟರ್ನೆಟ್ ನಿಷೇಧ ಮತ್ತು ಅಧಿಕಾರಿಗಳು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ರೈತ ಸಂಘಗಳು, ದೇಶಾದ್ಯಂತ 'ಚಕ್ಕಾ ಜಾಮ್' (ರಸ್ತೆ ಬಂದ್) ಘೋಷಿಸಿವೆ. ಇಂಟರ್ನೆಟ್ ನಿಷೇಧವನ್ನು ವಿರೋಧಿಸಿ ಫೆಬ್ರವರಿ 6 ರಂದು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರ ನಡುವೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ.