ಯಾಂಗಾನ್, ಫೆ.04 (DaijiworldNews/MB) : ಮಿಲಿಟರಿ ದಂಗೆ ಎದ್ದ ಹಿನ್ನೆಲೆ ಮ್ಯಾನ್ಮಾರ್ನಲ್ಲಿ ಸೇನೆಯು ದೇಶದ ಅಧಿಕಾರವನ್ನು ನಿಯಂತ್ರಣಕ್ಕೆ ಪಡೆದಿದೆ. ಏತನ್ಮಧ್ಯೆ ದೇಶದಲ್ಲಿ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಸರ್ಕಾರಿ ಸ್ವಾಮ್ಯದ ಎಂಪಿಟಿ ಸೇರಿದಂತೆ ಎಲ್ಲ ಇಂಟರ್ನೆಟ್ ಸೇವಾದಾರರು ಫೇಸ್ಬುಕ್ ಇಂಕ್ ಒಡೆತನದ ಸೇವೆಗಳನ್ನು ಗುರುವಾರ ನಿರ್ಬಂಧಿಸಲಾಗಿದೆ.
ತಡರಾತ್ರಿ ಮ್ಯಾನ್ಮಾರ್ನ ಸಂಪರ್ಕ ಮತ್ತು ಮಾಹಿತಿ ಸಚಿವಾಲಯವು ಆನ್ಲೈನ್ನಲ್ಲಿ ಪತ್ರ ಪ್ರಕಟಿಸಿದೆ. ಸ್ಥಿರತೆ ಕಾಪಾಡುವ ಸಲುವಾಗಿ ಫೆಬ್ರವರಿ 7ರ ವರೆಗೂ ಫೇಸ್ಬುಕ್ಗೆ ನಿರ್ಬಂಧ ಹೇರಲಾಗಿದೆ. ಫೇಸ್ಬುಕ್ನಲ್ಲಿ ಸುಳ್ಳು ಸುದ್ದಿಗಳನ್ನು ಹಾಗೂ ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ. ಆದ್ದರಿಂದ ಪ್ರಸ್ತುತ ಫೇಸ್ಬುಕ್ಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದೆ.
ಫೇಸ್ಬುಕ್ ಒಡೆತನದ ಹಲವು ಆನ್ಲೈನ್ ಸೇವೆಗಳನ್ನು ಬಳಸಲು ಆಗುತ್ತಿಲ್ಲವೆಂದು ಹಲವು ಬಳಕೆದಾರರು ದೂರು ನೀಡಿದ ಬೆನ್ನಲ್ಲೇ ಸರ್ಕಾರದ ಎಂಪಿಟಿ ಟೆಲಿಕಾಂ ಸಂಸ್ಥೆಯು ಫೇಸ್ಬುಕ್ ಹಾಗೂ ಅದರ ಮೆಸೆಂಜರ್, ಇನ್ಸ್ಟಾಗ್ರಾಂ ಹಾಗೂ ವಾಟ್ಸ್ಆ್ಯಪ್ ಸೇವೆಗಳನ್ನು ನಿರ್ಬಂಧಿಸಿದೆ ಎಂದು ನೆಟ್ವರ್ಕ್ ನಿರ್ವಹಣಾ ತಂಡ ನೆಟ್ಬ್ಲಾಕ್ಸ್ ಖಚಿತಪಡಿಸಿದೆ. ಇನ್ನು ಫೇಸ್ಬುಕ್ ವಕ್ತಾರ ಆ್ಯಂಡಿ ಸ್ಟೋನ್ ಸಹ ಇದನ್ನು ಖಾತರಿಪಡಿಸಿದ್ದು, ಸಂಪರ್ಕ ಮರುಸ್ಥಾಪಿಸುವಂತೆ ಆಡಳಿತಕ್ಕೆ ಒತ್ತಾಯಿಸಿದ್ದಾರೆ.
ಇನ್ನು ಮ್ಯಾನ್ಮಾರ್ನ 5.3 ಕೋಟಿ ಜನರಲ್ಲಿ ಅರ್ಧದಷ್ಟು ಜನರು ಫೇಸ್ಬುಕ್ ಬಳಸುತ್ತಿದ್ದಾರೆ ಎಂದು ವರದಿಯಾಗಿದೆ.
ಮ್ಯಾನ್ಮಾರ್ನಲ್ಲಿ ಮಿಲಿಟರಿ ದಂಗೆ ಎದ್ದ ಹಿನ್ನೆಲೆ ಪ್ರಸ್ತುತ ಸೇನೆಯು ದೇಶದ ಅಧಿಕಾರವನ್ನು ನಿಯಂತ್ರಣಕ್ಕೆ ಪಡೆದಿದೆ. ಈ ಕ್ರಮದ ವಿರುದ್ದ ಪ್ರತಿಭಟನೆ ವ್ಯಕ್ತಪಡಿಸುವ ಸಲುವಾಗಿ ಮ್ಯಾನ್ಮಾರ್ ಜನತೆ ವಿವಿಧ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಯಾಂಗೂನ್ನಲ್ಲಿ ಕೆಲ ಮಂದಿ ಬಿಂದಿಗೆ, ತಟ್ಟೆ ಹಾಗೂ ವಿವಿಧ ಪಾತ್ರೆಗಳನ್ನು ಬಾರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದು, ಇನ್ನೂ ಕೆಲ ಮಂದಿ ತಮ್ಮ ಕಾರುಗಳ ಹಾರ್ನ್ ಶಬ್ದವನ್ನು ಜೋರಾಗಿ ಹಾಕುವ ಮುಖಾಂತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.