ರಿಯೊ ಡಿ ಜನೈರೊ, ಫೆ.04 (DaijiworldNews/PY): ತನ್ನ ಪ್ರಥಮ ಸ್ವದೇಶಿ ನಿರ್ಮಿತ ಉಪಗ್ರಹ ಉಡಾವಣೆಗೆ ಬ್ರೆಜಿಲ್ ತಯಾರಾಗಿದೆ ಎಂದು ಬ್ರೆಜಿಲ್ ದೇಶದ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಐಎನ್ಪಿಇ ಪ್ರಕಟಣೆ ಹೊರಡಿಸಿದ್ದು, ಉಪಗ್ರಹಕ್ಕೆ ಅಮೆಜಾನಿಯಾ-1 ಎಂದು ಹೆಸರಿಸಲಾಗಿದೆ. ಈ ಉಪಗ್ರಹವನ್ನು ಫೆ.28ರಂದು ಭಾರತದ ಶ್ರೀಹರಿಕೂಟಾದಿಂದ ಉಡಾವಣೆ ಮಾಡಲಾಗುವುದು. ಈ ಉಪಗ್ರಹವು ಬ್ರೆಜಿಲ್ನ ಮೂರನೇ ದೂರ ಸಂವೇದಿ ಉಪಗ್ರಹವಾಗಲಿದೆ ಎಂದು ತಿಳಿಸಿದೆ.
ಚೀನಾ ಸಹಯೋಗದಲ್ಲಿ ಈ ಹಿಂದೆ ಸಿಬಿಇಆರ್ಎಸ್-4 ಹಾಗೂ ಸಿಬಿಇಆರ್ಎಸ್-4ಎ ಎನ್ನುವ ಉಪಗ್ರಹಗಳನ್ನು ನಿರ್ಮಿಸಲಾಗಿತ್ತು.
ಧ್ರುವೀಯ ಕಕ್ಷೆಯಲ್ಲಿ ಮಾತ್ರ ಇದು ಸುತ್ತುವ ಉಪಗ್ರಹವಾಗಿದ್ದು, ಈ ಉಪಗ್ರಹವು ಪ್ರತಿ ಐದು ದಿನಕ್ಕೊಮ್ಮೆ ಭೂಮಿಯ ಚಿತ್ರಗಳನ್ನು ರವಾನಿಸಲಿದೆ. ಈ ಉಪಗ್ರಹವು ಅಮೆಜಾನ್ ಮಿಷನ್ ಯೋಜನೆಯ ಭಾಗವಾಗಿ ನಾಲ್ಕು ವರ್ಷ ಕಾರ್ಯಾಚರಿಸಲಿದೆ. ಅಲ್ಲದೇ, ಅಮೇಜಾನ್ನ ಮೇಲ್ವಿಚಾರಣೆ ಹಾಗೂ ಅರಣ್ಯ ನಾಶಕ್ಕೆ ಸಂಬಂಧಪಟ್ಟ ದೂರ ಸಂವೇದಿ ಮಾಹಿತಿಯನ್ನೂ ಕೂಡಾ ಇದು ನೀಡಲಿದೆ.
ಸಾವೊ ಪಾಲೋದಲ್ಲಿರುವ ಐಎನ್ಪಿಇ ಪ್ರಯೋಗಾಲಯದಲ್ಲಿ ಈ ಉಪಗ್ರಹದ ಸಂಯೋಜನೆ ಹಾಗೂ ಪರೀಕ್ಷಾ ಕಾರ್ಯಗಳನ್ನು ನಡೆಸಲಾಗಿದೆ.