ನವದೆಹಲಿ, ಫೆ.10 (DaijiworldNews/PY): ಮಿಲಿಟರಿ ಆಡಳಿತದ ವಿರುದ್ಧ ಮ್ಯಾನ್ಮಾರ್ನ ರಾಜಧಾನಿ ನೈಪಿತಾವ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹಾಗೂ ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್ ಮಾತುಕತೆ ನಡೆಸಿದ್ದಾರೆ.
"ಮ್ಯಾನ್ಮಾರ್ನ ರಾಜಧಾನಿ ನೈಪಿತಾವ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ, ಅಮೇರಿಕಾ-ಭಾರತದ ಮಧ್ಯೆ ನಡುವಿನ ಪಾಲುದಾರಿಕೆಯ ಬಲವನ್ನು ಸದೃಢಗೊಳಿಸುವ ವಿಚಾರ ಸೇರಿದಂತೆ ಹಲವಾರು ಮುಖ್ಯ ವಿಚಾರದ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ" ಎಂದು ಅಮೇರಿಕಾದ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.
"ಇಬ್ಬರು ನಾಯಕರು ದೂರವಾಣಿಯ ಮೂಲಕ ಮಾತನಾಡಿದ್ದು, ಮ್ಯಾನ್ಮಾರ್ನ ಸೇನಾ ದಂಗೆ ಸೇರಿದಂತೆ ಹದಗೆಟ್ಟ ಕಾನೂನು ಹಾಗೂ ಪ್ರಜಾತಾಂತ್ರಿಕ ಪ್ರಕ್ರಿಯೆಗಳ ವಿಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ" ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಚುನಾವಣೆಯಲ್ಲಿ ಸಕ್ರಮ ನಡೆದಿದೆ ಎನ್ನುವ ಆರೋಪದ ಮೇಲೆ ಮ್ಯನ್ಮಾರ್ನಲ್ಲಿ ಕಳೆದ ವಾರ ಸೇನಾ ಆಡಳಿತ ಹಾಗೂ ಜನರಿಂದ ಆಯ್ಕೆಯಾದ ಸರ್ಕಾರವನ್ನು ಉರುಳಿಸಿ ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಅಲ್ಲದೇ ಮ್ಯಾನ್ಮಾರ್ನ ಹಿರಿಯ ನಾಯಕಿ ಆಂಗ್ ಸಾನ್ ಸೂಕಿ ಮತ್ತು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಇತರ ನಾಯಕರನ್ನು ಬಂಧಿಸಿದೆ.
ಮಿಲಿಟರಿ ಆಡಳಿತದ ವಿರುದ್ಧ ಮ್ಯಾನ್ಮಾರ್ನ ರಾಜಧಾನಿ ನೈಪಿತಾವ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಪೊಲೀಸರು ಸೋಮವಾರ ಜಲಫಿರಂಗಿ ಪ್ರಯೋಗ ಮಾಡಿದ್ದರು.
ಜಲಫಿರಂಗಿ ಪ್ರಯೋಗದ ವೇಳೆ ಅನೇಕ ಮಂದಿ ಗಾಯಗೊಂಡಿದ್ದು, ಇಬ್ಬರು ಪ್ರತಿಭಟನಕಾರರು ಪ್ರಜ್ಞೆ ತಪ್ಪಿ ಬಿದ್ದಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.