ವಾಷಿಂಗ್ಟನ್, ಫೆ.10 (DaijiworldNews/PY): ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೇರಿಕಾದ ಚುನಾವಣೆಯಲ್ಲಿ ಸೋತಿದ್ದನ್ನು ಒಪ್ಪಿಕೊಂಡಿರಲಿಲ್ಲ. ಆದರೆ, ಟ್ರಂಪ್ ಅವರಿಗೆ ಎರಡನೇ ಬಾರಿ ವಾಗ್ದಂಡನೆ ವಿಧಿಸುವ ಸಂದರ್ಭ ಅವರ ಪರ ವಕಾಲತ್ತು ವಹಿಸಿದ್ದ ವಕೀಲರು ಜೋ ಬಿಡೆನ್ ಅವರ ಗೆಲುವನ್ನು ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಮಂಗಳವಾರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ವಕೀಲ ಬ್ರೂಸ್ ಕ್ಯಾಸ್ಟರ್ ಅವರು, "ಅಮೇರಿಕಾದ ಜನತೆ ಹಳೆಯದನ್ನು ಇಷ್ಟಪಡದೇ ಇದ್ದರೆ ನೂತನ ಆಡಳಿತವನ್ನು ಆಯ್ಕೆ ಮಾಡುವಷ್ಟು ಚಾಣಾಕ್ಷರು ಹಾಗೂ ಅವರು ಹಾಗೇ ಮಾಡಿದ್ದಾರೆ ಎಂದು ಜೋ ಬಿಡೆನ್ ಆಯ್ಕೆ ಉಲ್ಲೇಖಿಸಿದೆ" ಎಂದಿದ್ದಾರೆ.
ಪೆನ್ಸಿಲ್ವೇನಿಯಾದ ಮಾಜಿ ಪ್ರಾಸಿಕ್ಯೂಟರ್ ಆಗಿರುವ ಕ್ಯಾಸ್ಟರ್ ಅವರ ಈ ಟೀಕೆಗಳು ಆಶ್ಚರ್ಯವನ್ನುಂಟು ಮಾಡಿದ್ದು, ಇದು ಟ್ರಂಪ್ ಅವರ ನಿಲುವಿಗೆ ವ್ಯತಿರಿಕ್ತವಾಗಿದೆ.
ಮಾಜಿ ಅಧ್ಯಕ್ಷ ಟ್ರಂಪ್ ತಮ್ಮ ಅಧಿಕಾರಾವಧಿಯ ಕೊನೆಯ ತನಕ ಚುನಾವಣೆಯ ಫಲಿತಾಂಶದ ವಿರುದ್ದ ಮಾತನಾಡುತ್ತಾ, "ನಾನು ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ" ಎಂದು ಹೇಳುತ್ತಿದ್ದರು.
ಕ್ಯಾಪಿಟಲ್ನ ಮೇಲೆ ಜ. 6ರಂದು ನಡೆದ ದಾಳಿಯನ್ನು ಪ್ರಚೋದಿಸಿದ ಆರೋಪದ ಮೇಲೆ ಡೊನಾಲ್ಡ್ ಟ್ರಂಪ್ ಅವರನ್ನು ವಾಗ್ದಂಡನೆ ಒಳಪಡಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ.