ವಾಷಿಂಗ್ಟನ್, ಫೆ.11(DaijiworldNews/HR): ಮ್ಯಾನ್ಮಾರ್ನಲ್ಲಿ ಸೇನಾ ದಂಗೆ ಮುಖಾಂತರ ಮಿಲಿಟರಿ ಆಡಳಿತ ಅಸ್ತಿತ್ವಕ್ಕೆ ಬಂದಿದ್ದು, ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಹೊಸ ನಿರ್ಬಂಧವನ್ನು ಹೇರಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿದ ಬಿಡೆನ್, "ಈ ಹೊಸ ಕಾರ್ಯಕಾರಿ ಆದೇಶವು ಮ್ಯಾನ್ಮಾರ್ನ ಜನರಲ್ಗಳು ಅಮೇರಿಕಾದ 1 ಬಿಲಿಯನ್ ಡಾಲರ್ ಆಸ್ತಿಯ ಬಳಕೆಯನ್ನು ನಿರ್ಬಂಧಿಸುತ್ತದೆ ಹಾಗೂ ಮತ್ತಷ್ಟು ಕ್ರಮಗಳು ಸದ್ಯದಲ್ಲೇ ಬರಲಿವೆ" ಎಂದಿದ್ದಾರೆ.
"ಮಿಲಿಟರಿ ವಶಪಡಿಸಿಕೊಂಡಿರುವ ಅಧಿಕಾರವನ್ನು ತ್ಯಜಿಸಬೇಕು ಮತ್ತು ಬರ್ಮಾದ ಜನರ ಇಚ್ಛೆಗೆ ಗೌರವ ತೋರಿಸಬೇಕು" ಎಂದರು.
ಇನ್ನು "ನೂತನ ನಿರ್ಬಂಧಗಳು ಮ್ಯಾನ್ಮಾರ್ನ ಮಿಲಿಟರಿ ಮುಖಂಡರಿಗೆ ಅನುಕೂಲವಾಗುವ ಅಮೇರಿಕಾ ಸ್ವತ್ತುಗಳನ್ನು ಸ್ಥಗಿತಗೊಳಿಸಲು ನಮ್ಮ ಆಡಳಿತಕ್ಕೆ ಅನುವು ಮಾಡಿಕೊಡುತ್ತದೆ ಮತ್ತು ಇದೇ ಸಮಯದಲ್ಲಿ ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ನಾಗರಿಕ ಸಮಾಜದ ಗುಂಪುಗಳು ಮತ್ತು ಮ್ಯಾನ್ಮಾರ್ ದೇಶದ ಜನರಿಗೆ ಅನುಕೂಲವಾಗುವ ಇತರ ಕ್ಷೇತ್ರಗಳ ಕಾರ್ಯಕ್ರಮಗಳಿಗೆ ಬೆಂಬಲವನ್ನು ಉಳಿಸಿಕೊಳ್ಳುತ್ತದೆ" ಎಂದು ತಿಳಿಸಿದ್ದಾರೆ.