ವಾಷಿಂಗ್ಟನ್, ಫೆ.11 (DaijiworldNews/PY): ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ದ ಅಮೇರಿಕಾದ ಸೆನೆಟ್ನಲ್ಲಿ ವಾಗ್ದಂಡನೆ ಪ್ರಕ್ರಿಯೆ ಪ್ರಾರಂಭವಾಗಿದೆ.
ಡೆಮಾಕ್ರಾಟ್ ನಿಯಂತ್ರಿತ ಸಂಸತ್ ಸಭೆಯಿಂದ ಮಾಜಿ ಅಧ್ಯಕ್ಷರ ವಿರುದ್ದದ ಬಂಡಾಯವನ್ನು ಪ್ರಚೋದಿಸಿದ ಆರೋಪವನ್ನು ಬಲವಾಗಿ ಪ್ರತಿಪಾದನೆ ಮಾಡಲಾಗಿತ್ತು. ಈಗ ಸೆನೆಟ್ನಲ್ಲಿ ವಾಗ್ದಂಡನೆ ಪ್ರಕ್ರಿಯೆ ಪ್ರಾರಂಭವಾಗಿದೆ.
ನ.3ರಂದು ನಡೆದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಸೇರಿದಂತೆ ವಿಜಯಶಾಲಿಗಳಿಗೆ ಪ್ರಮಾಣಪತ್ರ ನೀಡುವ ಸಂವಿಧಾನಬದ್ದ ಕಾರ್ಯದಲ್ಲಿ ಜ.6ರಂದು ಕಾಂಗ್ರೆಸ್ಸಿಗರು ಹಾಗೂ ಸೆನೆಟ್ನ ಸದಸ್ಯರು ನಿರತಯಾಗಿದ್ದರು. ಈ ವೇಳೆ, ಸಂಸತ್ತಿನ ಮೇಲೆ ತನ್ನ ಬೆಂಬಲಿಗರು ದಾಳಿ ನಡೆಸಲು ಪ್ರಚೋದನೆ ನೀಡಿದ ಆರೋಪವನ್ನು ಡೆಮಾಕ್ರಟಿಕ್ ಕಾಂಗ್ರೆಸ್ ಸದಸ್ಯ ಜೇಮೀ ರಾಸ್ಕಿನ್ ನೇತೃತ್ವದಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಪಕ್ಷದ ಸದಸ್ಯರನ್ನು ಒಳಗೊಂಡ ತಂಡವು ಡೊನಾಲ್ಡ್ ಟ್ರಂಪ್ ಅವರ ವಿರುದ್ದ ಹೊರಿಸಿದೆ.
ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರ ಸೋತಿದ್ದರೂ ಸಹ ಚುನಾವಣೆ ಸಂದರ್ಭ ಅಕ್ರಮ ನಡೆದಿದೆ ಎಂದು ಆರೋಪ ನಡೆಸಿದ್ದರು. ನಂತರ ಅವರ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಹಿಲ್ಸ್ನೊಳಗೆ ನುಗ್ಗಿ ದಾಂಧಲೆ ನಡೆಸಿದ್ದರು. ಜ.20ರಂದು ಅಮೇರಿಕಾದ 46ನೇ ಅಧ್ಯಕ್ಷರಾಗಿ ಜೋ ಬಿಡೆನ್ ಅವರು ಪ್ರಮಾಣವಚನ ಸ್ವೀಕರಿಸಿದ್ದರು.
ಜ.20ಕ್ಕಿಂತ ಮುನ್ನವೇ ಸದನವು ಟ್ರಂಪ್ ಅವರು ಅಧಿಕಾರದಲ್ಲಿದ್ದ ಸಂದರ್ಭವೇ ಅವರ ವಿರುದ್ದ ಮೊದಲು ದೋಷಾರೋಪಣೆ ಮಾಡಿತ್ತು. ಟ್ರಂಪ್ ಅವರು ಅಧಿಕಾರದಿಂದ ಕೆಳಗಿಳಿದ ಮೂರು ವಾರಗಳ ಬಳಿಕ ವಾಗ್ದಂಡನೆ ವಿಚಾರಣೆ ಆರಂಭವಾಗಿದೆ.
"ಡೊನಾಲ್ಡ್ ಟ್ರಂಪ್ ಅವರು ಉದ್ದೇಶಪೂರ್ವಕವಾಗಿ ಕ್ಯಾಪಿಟಲ್ನಲ್ಲಿ ಗಲಭೆಗೆ ದಂಗೆಕೋರ ಜನಸಮೂಹವನ್ನು ಪ್ರಚೋದಿಸಿದ್ದಾರೆ" ಎಂದು ರಾಸ್ಕಿನ್ ಆರೋಪಿಸಿದ್ದಾರೆ.
"ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಗ್ಧ ಪ್ರೇಕ್ಷಕನಲ್ಲ ಎಂದು ನಿಮಗೆ ಪುರಾವೆಗಳು ತೋರಿಸುತ್ತವೆ. ಗಲಭೆಗೆ ಸ್ಪಷ್ಟವಾಗಿ ಅವರು ಪ್ರಚೋದನೆ ನೀಡಿದ್ದಾರೆ ಎಂದು ಪುರಾವೆಗಳು ತೋರಿಸುತ್ತವೆ. ಕಮಾಂಡರ್ ಇನ್ ಚೀಫ್ ಆಗಿ ಟ್ರಂಪ್ ಅವರು ತಮ್ಮ ವೃತ್ತಿಧರ್ಮವನ್ನು ತ್ಯಾಗ ಮಾಡಿದರು. ಇದು ಅಪಾಯಕಾರಿ ದಂಗೆಯ ಪ್ರಧಾನ ಪ್ರಚೋದಕರಾಗಿದ್ದರು ಎನ್ನುವುದನ್ನು ತೋರಿಸುತ್ತದೆ" ಎಂದಿದ್ದಾರೆ.