ವಾಷಿಂಗ್ಟನ್, ಫೆ.12 (DaijiworldNews/PY): "ಹೂಡಿಕೆ ಮಾಡಲು ಭಾರತ ಅತ್ಯಂತ ಪ್ರಶಸ್ತವಾದ "ಎಂದು ಅಮೇರಿಕಾ ಸರ್ಕಾರದ ವಿಶೇಷ ಅಧಿಕಾರಿ ಜಾನ್ ಕೆರ್ರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಮೇರಿಕಾದ ರಾಷ್ಟ್ರೀಯ ಭದ್ರತಾ ಸಮಿತಿಯ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗ 2021ರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಹವಾಮಾನ ಬದಲಾವಣೆಯಿಂದ ಎದುರಾಗುವಂತಹ ಸವಾಲುಗಳ ಬಗ್ಗೆ ಪ್ರಧಾನಿ ಮೋದಿ ಅವರು ಅರಿವು ಹೊಂದಿದ್ದಾರೆ. ನಾವು ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ" ಎಂದಿದ್ದಾರೆ.
ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ಸರ್ಕಾರದಲ್ಲಿ ಹವಾಮಾನ ಬಗೆಗಿನ ವಿಚಾರಗಳ ವಿಶೇಷ ಅಧಿಕಾರಿಯಾಗಿರುವ ಕಾನ್ ಕೆರ್ರಿ, "ನಾವು ಪ್ರಧಾನಿ ಮೋದಿ ಅವರು ಸೇರಿದಂತೆ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇವೆ. ನಾವು ಈಗಾಗಲೇ ಹಲವು ವಿಚಾರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೇವೆ. ಉಭಯ ರಾಷ್ಟ್ರಗಳು ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ. ಮುಂಬರುವ ದಿನಗಳಲ್ಲಿ ಹವಾಮಾನ ವೈಪರೀತ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ಜೊತೆಯಾಗಿ ಕಾರ್ಯನಿರ್ವಹಿಸಲಿವೆ" ಎಂದು ಹೇಳಿದ್ದಾರೆ.
"ಶೀಘ್ರವೇ ಭಾರತಕ್ಕೆ ಭೇಟಿ ನೀಡಲು ಇಚ್ಛಿಸುತ್ತೇನೆ. ನವೀಕರಿಸಬಲ್ಲ ಇಂಧನದ ಉಪಯೋಗ ಹಾಗೂ ಉತ್ತೇಜನದಲ್ಲಿ ಭಾರತದ ಕಾರ್ಯ ಶ್ಲಾಘನೀಯ. ಇದು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಿಗೆ ಸೂಕ್ತ" ಎಂದಿದ್ದಾರೆ.