ವಾಷಿಂಗ್ಟನ್, ಫೆ.12 (DaijiworldNews/HR): ಭಾರತ ಮತ್ತು ಚೀನಾ ಪೂರ್ವ ಲಡಾಖ್ನಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ನಡೆಸಿರುವ ಪ್ರಯತ್ನಗಳನ್ನು ಅಮೇರಿಕಾ ಸ್ವಾಗತಿಸಿದೆ.
ಸಾಂಧರ್ಭಿಕ ಚಿತ್ರ
"ಎರಡು ದೇಶಗಳು ಶಾಂತಿ ಸ್ಥಾಪಿಸುವ ನಿರ್ಣಯವನ್ನು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯವಾಗಿದ್ದು, ಸೇನಾ ಪಡೆಗಳನ್ನು ವಾಪಸ್ ಕರೆಯಿಸಿಕೊಳ್ಳುತ್ತಿರುವ ವರದಿಗಳನ್ನು ಗಮನಿಸಲಾಗುತ್ತಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಕೈಗೊಂಡಿರುವ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ" ಎಂದು ವಿದೇಶಾಂಗ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಈ ಕುರಿತು ಸಂಸದ ಮೈಕಲ್ ಮ್ಯಾಕೌಲ್ ಕೂಡ ಸ್ವಾಗತಿಸಿದ್ದು, "ಭಾರತವು ತನ್ನ ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಬಲಿಷ್ಠವಾದ ನಿಲುವು ಕೈಗೊಂಡಿರುವುದು ಪ್ರಶಂಸನೀಯ. ಚೀನಾ ಕಮ್ಯುನಿಸ್ಟ್ ಪಕ್ಷದ ಸರ್ಕಾರ ನಿರಂತರವಾಗಿ ವಿವಿಧ ಸ್ಥಳಗಳಲ್ಲಿ ಅತಿಕ್ರಮಣದಲ್ಲಿ ತೊಡಗಿದ್ದು, ಪೂರ್ವ ಮತ್ತು ದಕ್ಷಿಣ ಸಮುದ್ರದಿಂದ ಮೆಕಾಂಗ್ವರೆಗೆ ಹಾಗೂ ಹಿಮಾಲಯದವರೆಗೆ ಚೀನಾ ಅತಿಕ್ರಮಣಕ್ಕೆ ಯತ್ನಿಸುತ್ತಿದೆ" ಎಂದು ಹೇಳಿದ್ದಾರೆ.