ಜಿನಿವಾ, ಫೆ.13 (DaijiworldNews/PY): ವಿಶ್ವದಾದ್ಯಂತ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿವೆ. ಆದರೆ, ಕೊರೊನಾ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ನೆರವಾಗುವ ನಿರ್ಬಂಧಗಳನ್ನು ಸಡಿಲಿಸುವುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ.
"ಯಾವುದೇ ದೇಶದಲ್ಲಾದರೂ ನಿರ್ಬಂಧಗಳನ್ನು ಸಡಿಲಿಸಲು ಇದು ಸೂಕ್ತವಾದ ಸಮಯವಲ್ಲ. ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲೇಬೇಕು" ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಂದಿದ್ದಾರೆ.
"ಕೊರೊನಾ ಸೋಂಕು ಪ್ರಕರಣಗಳು ಸತತ ನಾಲ್ಕನೇ ವಾರವೂ ಕಡಿಮೆಯಾಗಿದೆ ಹಾಗೂ ಸತತ ಎರಡನೇ ವಾರದಲ್ಲಿ ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ" ಎಂದು ತಿಳಿಸಿದ್ದಾರೆ.
"ಆರೋಗ್ಯ ರಕ್ಷಣೆಯ ಕ್ರಮವನ್ನು ಎಲ್ಲಾ ರಾಷ್ಟ್ರಗಳು ಕೂಡಾ ಕಟ್ಟುನಿಟ್ಟಾಗಿ ಪಾಲಿಸಿದ ಕಾರಣ ಕೊರೊನಾದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ, ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭ ಯಾವುದೇ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಭಾವಿಸಬಾರದು" ಎಂದು ಹೇಳಿದ್ದಾರೆ.
"ಕೊರೊನಾ ವೈರಸ್ನ ಮೂಲದ ಬಗ್ಗೆ ತನಿಖೆ ನಡೆಸಲು ಚೀನಾಗೆ ತೆರಳಿರುವ ಡಬ್ಲ್ಯೂಎಚ್ಒ ತಂಡವು ಮುಂದಿನ ವಾರದಲ್ಲಿ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ' ಎಂದಿದ್ದಾರೆ.