ವಿಶ್ವಸಂಸ್ಥೆ, ಫೆ.13 (DaijiworldNews/HR): ಭಾರತೀಯ ಮೂಲದ ನೌಕರರೊಬ್ಬರು ಮುಂದಿನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಉಮೇದುವಾರಿಕೆ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ.
ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಲೆಕ್ಕಪತ್ರ ಪರಿಶೋಧನಾ ಸಂಯೋಜಕಿಯಾಗಿರುವ ಅರೋರಾ ಆಕಾಂಕ್ಷಾ(34), ವಿಶ್ವದ ಅತ್ಯುನ್ನತ ರಾಜತಾಂತ್ರಿಕ ಹುದ್ದೆಯಾಗಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿರುವುದಾಗಿ ಘೋಷಿಸಿದ್ದಾರೆ.
ಹಾಲಿ ಪ್ರಧಾನ ಕಾರ್ಯದರ್ಶಿಯಾಗಿರುವ ಆಂಟೊನಿಯೊ ಗುಟೆರಸ್(71) ಅವರ ಅಧಿಕಾರಾವಧಿ ಈ ವರ್ಷದ ಡಿಸೆಂಬರ್ಗೆ ಕೊನೆಗೊಳ್ಳಲಿದ್ದು, ಮುಂದಿನ ಐದು ವರ್ಷಗಳ ಅವಧಿಗೂ ತಾನೇ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯಲು ಬಯಸಿರುವುದಾಗಿ ಗುಟೆರಸ್ ಕಳೆದ ತಿಂಗಳು ಹೇಳಿದ್ದರು. ಇದರ ನಡುವೆಯೇ ಆಕಾಂಕ್ಷಾ ಅವರು ಉಮೇದುವಾರಿಕೆ ಪ್ರಕಟಿಸಿದ್ದಾರೆ ಎನ್ನಲಾಗಿದೆ.
ಇನ್ನು "ಪ್ರಚಾರಾಂದೋಲನದ ಭಾಗವಾಗಿ ಎರಡೂವರೆ ನಿಮಿಷಗಳ ವಿಡಿಯೊ ತುಣುಕನ್ನು ಅರೋರಾ ಆಕಾಂಕ್ಷಾ ಯುಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದು, ಆ ವಿಡಿಯೊದಲ್ಲಿ ‘ನನ್ನ ಸ್ಥಾನದಲ್ಲಿರುವ ಜನರು, ಅಂಥದ್ದೊಂದು ಉನ್ನತ ಹುದ್ದೆಗೆ ಏರುವುದು ಅಸಾಧ್ಯ. ಆದರೆ ಅಂಥ ಅವಕಾಶ ಬರುವವರೆಗೂ ನಮ್ಮ ಸರದಿಗಾಗಿ ಕಾಯಬೇಕು" ಎಂದು ಹೇಳಿದ್ದಾರೆ.