ಯಾಂಗೊನ್, ಫೆ.15(DaijiworldNews/PY): "ಮ್ಯಾನ್ಮಾರ್ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರು ಸೋಮವಾರದ ಬದಲು ಬುಧವಾರ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಅಲ್ಲಿಯ ತನಕ ಸೂಕಿ ಅವರನ್ನು ಬಂಧನದಲ್ಲೇ ಇರಿಸಲು ಸೇನಾಡಳಿತ ತೀರ್ಮಾನ ಮಾಡಿದೆ" ಎಂದು ಸೂಕಿ ಪರ ವಕೀಲರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ವಕೀಲ ಖಿನ್ ಮಾಂಗ್ ಜಾವ್ ಅವರು, "ವಿಡಿಯೋ ಕಾನ್ಫರೆನ್ಸ್ ಮೂಲಕ ಆರಂಭದ ವಿಚಾರಣೆ ನಡೆಯಲಿದೆ. ಆದರೆ, ವಿಚಾರಣೆಯು ನ್ಯಾಯಸಮ್ಮತವಾಗಿ ನಡೆಯುತ್ತದೆಯೇ ಎನ್ನುವುದನ್ನು ನೀವೇ ಊಹಿಸಬೇಕು" ಎಂದಿದ್ದಾರೆ.
"ಮ್ಯಾನ್ಮಾರ್ನ ಯಾಂಗೊನ್ನಲ್ಲಿ ಮಿಲಿಟರಿ ಆಡಳಿತವನ್ನು ವಿರೋಧಿಸಿ ರವಿವಾರ ರಾತ್ರಿ ಪ್ರತಿಭಟನೆ ನಡೆದಿದೆ. ಪ್ರತಿಭಟನೆ ಹಿನ್ನೆಲೆ ನಗರದೆಲ್ಲೆಡೆ ಸೇನಾ ಶಸ್ತ್ರಾಸ್ತ್ರ ಪಡೆಯನ್ನು ನಿಯೋಜನೆ ಮಾಡಲಾಗಿದ್ದ, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
"ಪ್ರತಿಭಟನಾಕಾರರ ಮೇಲೆ ಕೆನಡಾ, ಅಮೇರಿಕಾ ಹಾಗೂ 12 ಯುರೋಪಿಯನ್ ರಾಷ್ಟ್ರಗಳ ರಾಯಭಾರಿಗಳು ಹಿಂಸಾತ್ಮಕ ನಡೆಯನ್ನು ತೆಗೆದುಕೊಳ್ಳಬಾರದು. ಸರ್ಕಾರದ ವಿರುದ್ದವಾಗಿ ನ್ಯಾಯಯುತವಾಗಿ ಪ್ರತಿಭಟನೆ ನಡೆಸಲು ಬಿಡಬೇಕು" ಎಂದು ಮ್ಯಾನ್ಮಾರ್ ಸೇನೆಗೆ ಮನವಿ ಮಾಡಿದ್ದಾರೆ.
"ಕೂಡಲೇ ರಾಜಕೀಯ ನಾಯಕರು ಹಾಗೂ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು" ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದ್ದಾರೆ.