ಕೊಲಂಬೊ, ಫೆ.16 (DaijiworldNews/MB) : ''ನಮ್ಮ ದೇಶದಲ್ಲಿ ರಾಜಕೀಯ ಮಾಡಲು ಬಿಜೆಪಿಗೆ ಅವಕಾಶವಿಲ್ಲ'' ಎಂದು ಶ್ರೀಲಂಕಾ ಚುನಾವಣಾ ಆಯೋಗ ಖಡಕ್ ಆಗಿ ಹೇಳಿದೆ. ಬಿಜೆಪಿ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಘಟಕ ಸ್ಥಾಪನೆಗೆ ಯೋಜಿಸಿದೆ ಎಂದು ಆದ ವರದಿಗಳನ್ನು ಅಲ್ಲಗಳೆದ ಶ್ರೀಲಂಕಾ ಚುನಾವಣಾ ಆಯೋಗದ ಅಧ್ಯಕ್ಷ ನಿಮಲ್ ಪುಂಚಿಹೆವಾ, ''ನಮ್ಮ ರಾಷ್ಟ್ರದ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆ ವಿದೇಶಿ ಸಂಪರ್ಕ ಹೊಂದಿರಬಹುದು. ಆದರೆ ನಾವು ಬೇರೆ ದೇಶದ ರಾಜಕೀಯ ಪಕ್ಷಗಳು ನಮ್ಮ ದೇಶದಲ್ಲಿ ರಾಜಕಾರಣ ನಡೆಸಲು ಸಮ್ಮತಿ ನೀಡಲಾರೆವು'' ಎಂದು ಹೇಳಿದ್ದಾರೆ.
"ನೇಪಾಳ ಹಾಗೂ ಶ್ರೀಲಂಕಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಸರ್ಕಾರ ಸ್ಥಾಪಿಸುವ ಯೋಜನೆಯನ್ನು ಹೊಂದಿದ್ದಾರೆ" ಎಂದು ತ್ರಿಪುರದ ಬಿಜೆಪಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದ್ದು ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಚುನಾವಣಾ ಆಯೋಗವು ಸ್ಪಷ್ಟನೆ ನೀಡಿದೆ.
''ಬಿಜೆಪಿ ಪಕ್ಷವನ್ನು ದೇಶದ ಎಲ್ಲಾ ರಾಜ್ಯಗಳಲ್ಲೂ ಮಾತ್ರವಲ್ಲದೇ, ನೆರೆಯ ರಾಷ್ಟ್ರಗಳಲ್ಲೂ ಕೂಡಾ ಸಂಘಟಿಸುವ ಯೋಜನೆ ಇದೆ. ಅಮಿತ್ ಶಾ ಅವರು ಬಿಜೆಪಿಯು ದೇಶದ ಎಲ್ಲಾ ರಾಜ್ಯಗಳಲ್ಲಿ ಗೆದ್ದುಬಂದ ನಂತರ ವಿದೇಶಗಳಲ್ಲಿಯೂ ಪಕ್ಷವನ್ನು ವಿಸ್ತರಿಸುವ ವಿಚಾರದ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದರು. ನಾವು ಶ್ರೀಲಂಕಾ ಹಾಗೂ ನೇಪಾಳದಲ್ಲಿ ಅಧಿಕಾರ ಹೊಂದಬೇಕು ಎಂದು ಅಮಿತ್ ಶಾ ಅವರು ಹೇಳಿದ್ದರು" ಎಂದು ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದರು.
ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶ್ರೀಲಂಕಾ ಅಧ್ಯಕ್ಷ ಗೋಟಭಯ ರಾಜಪಕ್ಸ ಅವರ ಸಹೋದರ ಬೆಸಿಲ್ ರಾಜಪಕ್ಸ, ''ಶ್ರೀಲಂಕಾದ ಆಡಳಿತಾರೂಢ 'ಪುದುಜನ ಪೆರಮುನಾ' ಪಕ್ಷವು ಭಾರತದ ಬಿಜೆಪಿಯಂತಾಗಬೇಕು ಅಥವಾ ಚೀನಾದ ಕಮ್ಯುನಿಸ್ಟ್ ಪಾರ್ಟಿಯಂತೆ ಆಗಬೇಕು'' ಎಂದು ಹೇಳಿದ್ದರು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.