ವಿಶ್ವಸಂಸ್ಥೆ, ಫೆ.18 (DaijiworldNews/PY): "2 ಲಕ್ಷ ಡೋಸ್ ಕೊರೊನಾ ಲಸಿಕೆಯನ್ನು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಕೊಡುಗೆಯಾಗಿ ಘೋಷಿಸಿದ ಭಾರತಕ್ಕೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ" ಎಂದು ಅವರ ವಕ್ತಾರರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯನ್ನುದ್ದೇಶಿಸಿ ಮಾತನಾಡುವ ಸಂದರ್ಭ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಈ ವಿಚಾರದ ಬಗ್ಗೆ ಘೋಷಣೆ ಮಾಡಿದ್ದು, "ಕಠಿಣ ಸಂದರ್ಭದಲ್ಲೂ ಕೂಡಾ ಕಾರ್ಯನಿರ್ವಹಿಸುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ 2 ಲಕ್ಷ ಡೋಸ್ ಕೊರೊನಾ ಲಸಿಕೆಯ ಕೊಡುಗೆಯಾಗಿ ನೀಡುತ್ತೇವೆ" ಎಂದು ಘೋಷಣೆ ಮಾಡಿದ್ದರು.
"2 ಲಕ್ಷ ಡೋಸ್ ಕೊರೊನಾ ಲಸಿಕೆಯನ್ನು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಕೊಡುಗೆಯಾಗಿ ಘೋಷಣೆ ಮಾಡಿದ ಭಾರತದ ನಿಯೋಗಕ್ಕೆ ಕೃತಜ್ಞತೆಗಳು. ಕೊರೊನಾ ಲಸಿಕೆಗಳನ್ನು ನೀಡಲು ಸಮರ್ಪಕವಾದ ವ್ಯವಸ್ಥೆಯನ್ನು ಮಾಡಲಾಗುವುದು" ಎಂದು ಪ್ರಧಾನ ಕಾರ್ಯದರ್ಶಿ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ.
"ವಿಶ್ವಸಂಸ್ಥೆಯ ಶಾಂತಿಪಾಲನಾ ಸಭೆಯಲ್ಲಿ ಸುಮಾರು 121 ದೇಶಗಳ 94,484 ಸಿಬ್ಬಂದಿಗಳಿದ್ದು, ಈ ಸಿಬ್ಬಂದಿಗಳು ವಿಶ್ವದ 12 ಕಡೆಗಳಲ್ಲಿ ಶಾಂತಿಪಾಲನಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸಿಬ್ಬಂದಿಗಳಿಗೆ ಭಾರತ ಘೋಷಣೆ ಮಾಡಿರುವ ಕೊರೊನಾ ಲಸಿಕೆಯಿಂದಾಗಿ ಎರಡು ಬಾರಿ ಲಸಿಕೆ ನೀಡಲು ಸಾಧ್ಯವಾಗುತ್ತದೆ" ಎಂದಿದ್ದಾರೆ.
"ವಿವಿಧ ದೇಶಗಳ ರಾಯಭಾರಿಗಳು ಭಾರತದ ಈ ಕ್ರಮವನ್ನು ಸ್ವಾಗತಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ" ಎಂದು ತಿಳಿಸಿದ್ದಾರೆ.