ವಾಷಿಂಗ್ಟನ್, ಫೆ.19 (DaijiworldNews/HR): ನಾಸಾದ ಮಹತ್ವಾಕಾಂಶೆಯ ಯೋಜನೆಯೆಂದು ಹೇಳಲಾಗುತ್ತಿದ್ದ, ನಾಸಾದ ರೋವರ್ ಮಿಷನ್ ಮಂಗಳನ ಅಂಗಳಕ್ಕೆ ಯಶಸ್ವಿಯಾಗಿ ಇಳಿದಿದ್ದು, ರೋವರ್ ಯಶಸ್ವಿಯಾಗಿ ಮಂಗಳನ ಅಂಗಳಕ್ಕೆ ತಲುಪಿರುವಲ್ಲಿ ಭಾರತ ಮೂಲದ ಮಹಿಳೆಯೋರ್ವರ ಪಾಲಿರುವುದು ಇಡೀ ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ.
ಈ ರೋವರ್ ನ ನಿಯಂತ್ರಣ ಹಾಗೂ ಪಥ ಮಾರ್ಗದರ್ಶನ ಇಂಜಿನಿಯರ್ ಆಗಿದ್ದವರು ಭಾರತ ಮೂಲದ ಡಾ. ಸ್ವಾತಿ ಮೋಹನ್.
ಅಮೇರಿಕಾದಲ್ಲಿ ಅನೇಕ ವರ್ಷಗಳಿಂದ ನೆಲೆಸಿರುವ ಕನ್ನಡಿಗರಾದ ಜ್ಯೋತಿ ಹಾಗೂ ಮೋಹನ್ ದಂಪತಿಗಳ ಪುತ್ರಿ, ಡಾ. ಸ್ವಾತಿ ಮೋಹನ್.
ಕ್ಯಾಲಿಫೋರ್ನಿಯಾದ ನಾಸಾದ ನಿಯಂತ್ರಣ ಕೊಠಡಿಯಲ್ಲಿ ಗೈಡೆನ್ಸ್ ಆಯಂಡ್ ನೇವಿಗೇಶನ್ ಹಾಗೂ ಕಂಟ್ರೋಲ್ ಯೋಜನೆಯ ತಂಡದ ನಡುವೆ ಸ್ವಾತಿ ಯಶಸ್ವಿಯಾಗಿ ರೋವರ್ ಅನ್ನು ಮಂಗಳನ ಅಂಗಳಕ್ಕೆ ಇಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಡಾ. ಸ್ವಾತಿ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದಿದ್ದಾರೆ ಮತ್ತು ಏರೋನಾಟಿಕ್ಸ್ ಎಂಐಟಿಯಿಂದ ಎಂಎಸ್ ಮತ್ತು ಪಿಎಚ್ಡಿ ಪೂರ್ಣಗೊಳಿಸಿದ್ದಾರೆ. ಸಿಎ ಪಾಸಡೆನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿಯಲ್ಲಿ ಮೊದಲಿನಿಂದಲೂ ಸ್ವಾತಿ ರೋವರ್ ಮಿಷನ್ ನ ವಿಜ್ಞಾನಿಗಳ ತಂಡದಲ್ಲಿದ್ದರು, ಡಾ.ಮೋಹನ್ ಅವರು ನಾಸಾದ ವಿವಿಧ ಪ್ರಮುಖ ಕಾರ್ಯಗಳಲ್ಲಿ ಪಾಲು ಪಡೆದಿದ್ದಾರೆ. ಭಾರತೀಯ-ಅಮೇರಿಕನ್ ವಿಜ್ಞಾನಿ ಡಾ. ಸ್ವಾತಿ ಅವರು ಕ್ಯಾಸಿನಿ ಮತ್ತು ಗ್ರೇಲ್ ಯೋಜನೆಗಳಲ್ಲಿ ಕೆಲಸ ಮಾಡಿದ್ದು, ನುರಿತ ವಿಜ್ಞಾನಿಯಾಗಿದ್ದಾರೆ.